ಕುಷ್ಟಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೈ ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಸಹ ಅದೇ ಕೆಲಸ ಮಾಡುತ್ತಾರೆ ಎಂಬ ಲಕ್ಷಣಗಳು ಗೋಚರಿಸುತ್ತಿವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಶುಕ್ರವಾರ ನಡೆಯಲಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಅನಾವರಣಕ್ಕಾಗಿ ಆಗಮಿಸಿರುವ ಅವರು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆರಂಭದ ಉತ್ಸಾಹ ಈಗಿಲ್ಲ. ಸಮುದಾಯದ ಪ್ರಮುಖರು, ಸ್ವಾಮೀಜಿಗಳ ಮೂಗಿಗೆ ತುಪ್ಪ ಸವರುವ ಹಾಗೂ ಹೆಗಲ ಮೇಲೆ ಕೈ ಹಾಕಿ ಮಾತನಾಡುವುದು ಬಿಟ್ಟರೆ ಭರವಸೆ ಈಡೇರಿಸುತ್ತಿಲ್ಲ. ಬೊಮ್ಮಾಯಿ ಮಂಡಿ, ಕಾಲು ನೋವು ಎಂದು ಗೋಳಾಡುತ್ತಿದ್ದಾರೆ. ಈ ಮಧ್ಯೆ ಭರವಸೆ ಈಡೇರಿಸುವುದು ಆಗುವುದಿಲ್ಲ ಎಂದು ಸಮುದಾಯದ ಕ್ಷಮೆ ಕೇಳಿದರೆ ಅವರನ್ನು ಕೇಳುವುದನ್ನೇ ಬಿಡುತ್ತೇವೆ. ಸಮುದಾಯದ ಋಣ ತೀರಿಸಬೇಕೆಂಬ ಮನಸ್ಸಿದ್ದರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮಾಡು ಇಲ್ಲವೆ ಮಡಿ ಎನ್ನುವಂತೆ ಉಗ್ರ ಹೋರಾಟದ ನಿರ್ಧಾರ ಕೈಗೊಳ್ಳಲಾಗಿದೆ. 2022 ಮುಗಿಯುವುದರೊಳಗೆ ಮೀಸಲಾತಿ ಪಡೆದೇ ಮಡಿಯುವ ನಿರ್ಧಾರ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗಿದೆ. ಬಳೂಟಗಿಯಲ್ಲಿ ನಡೆಯಲಿರುವ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಹೋರಾಟದ ರಣಕಹಳೆ ಊದಲಾಗುತ್ತದೆ ಎಂದು ಎಚ್ಚರಿಸಿದರು. ಸಮುದಾಯದ ತಾಲೂಕು ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಪ್ರಮುಖರಾದ ಶೇಖರಗೌಡ ಪಾಟೀಲ್, ಬಾಳಪ್ಪ ಮೇಟಿ, ಗುದ್ನೆಪ್ಪ ಮೇಟಿ, ಅಮರೇಗೌಡ ಪಾಟೀಲ್, ಬಸೆಟೆಪ್ಪ ಸುಂಕದ್ ಇತರರಿದ್ದರು.