ಕುಷ್ಟಗಿ: ಸಮಾಜದಲ್ಲಿ ಸ್ಥಾನಮಾನಗಳು ಬದಲಾದರೂ ಮಾನವೀಯ ಮೌಲ್ಯಗಳು-ಸಂಬಂಧಗಳು ಬದಲಾಗದಂತಿರಬೇಕು ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಚಳಗೇರಾ ಮಠದ ಲಿಂ.ವಿರೂಪಾಕ್ಷಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆ ದಶಮಾನೋತ್ಸವ ನಿಮಿತ್ತ ಶನಿವಾರ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಗತ್ತು ಮತ್ತು ಜನ ಎಷ್ಟೇ ಬದಲಾದರೂ ಮಾನವ ಸಂಬಂಧಗಳು ಸಡಿಲಗೊಳ್ಳಬಾರದು. ಬಾಂಧವ್ಯ-ಸಂಬಂಧಗಳನ್ನು ಮರೆತರೆ ಮನುಷ್ಯನಿಗೂ ಮತ್ತು ಯಂತ್ರಕ್ಕೂ ವ್ಯತ್ಯಾಸ ಇರುವುದಿಲ್ಲ. ದೇಹಕ್ಕೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು, ವ್ಯಕ್ತಿತ್ವವೇ ಕೊಳೆಯಾದರೆ ತೊಳೆಯುವುದು ಕಷ್ಟ. ವಿನಯ, ಸರಳತೆ, ಸೌಜನ್ಯಗಳು ವ್ಯಕ್ತಿತ್ವಕ್ಕೆ ಶೋಭೆ ತರುವ ಆಭರಣಗಳಷ್ಟೇ ಅಲ್ಲ, ಸುತ್ತಲಿನ ವಾತಾವರಣ ಶುದ್ಧಗೊಳಿಸುವ ಶಕ್ತಿಯೂ ಅವುಗಳಲ್ಲಿರುತ್ತದೆ. ಕಷ್ಟ ಬಂದಾಗ ಕಲ್ಲಿನಂತಿರಬೇಕು. ಸುಖ ಬಂದಾಗ ಹೂವಿನಂತೆ ಮಧುರವಾಗಿರಬೇಕು ಎಂದರು.
ಶ್ರೀಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿರೂಪಾಕ್ಷಲಿಂಗ ಶಿವಾಚಾರ್ಯರು ತಾವು ಕಷ್ಟ ಅನುಭವಿಸಿ, ನಂಬಿದ ಭಕ್ತರ ಬಾಳಿಗೆ ಬೆಳಕು ಕರುಣಿಸಿ ಕಾರುಣ್ಯ ಮೂರ್ತಿಯಾಗಿದ್ದರು ಎಂದು ಬಣ್ಣಿಸಿದರು.
ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು ಭಕ್ತರಿಗೆ ಶಿಕ್ಷಣ, ಸಂಸ್ಕಾರದ ಜತೆಗೆ ಪ್ರಸಾದ ನೀಡುವ ಕಾರ್ಯ ಮಾಡುತ್ತಿವೆ ಎಂದರು.
ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಭಕ್ತರೇ ಮಠದ ಆಸ್ತಿ. ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾರ್ಯ ಮಠಗಳಿಂದಾಗುತ್ತಿದೆ ಎಂದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಶ್ರೀಮಠದಿಂದ ಆರಂಭಿಸಲಾಗುತ್ತಿರುವ ನೂರು ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಾಜಿ ಸಂಸದ ಸಂಗಣ್ಣ ಕರಡಿ, ಮುಕ್ತಿ ಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸಿದ್ದರ ಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಎಮ್ಮಿಗನೂರಿನ ವಾಮದೇವ ಮಹಾಂತ ವೀರಭದ್ರ ಶಿವಾಚಾರ್ಯರು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು.
ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು. ಹರಸೂರು ಸಿದ್ದರಾಮ ಶಿವಾಚಾರ್ಯರು, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯರು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಕಲಾದಗಿಯ ಗಂಗಾಧರ ಶಿವಾಚಾರ್ಯರು, ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು, ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನಸಾಬ ದೋಟಿಹಾಳ, ಪ್ರಮುಖರಾದ ಎಸ್.ಆರ್. ನವಲಿ ಹಿರೇಮಠ, ಬಿ.ಎಸ್.ಪಾಟೀಲ್ ಇತರರು ಇದ್ದರು. ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಧರ್ಮಸಭೆಗೂ ಮುನ್ನ ವಿರೂಪಾಕ್ಷಲಿಂಗ ಶಿವಾಚಾರ್ಯರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ನಂತರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಒಳ್ಳೆಯತನಕ್ಕೆ ಬೆಲೆ ಇಲ್ಲ ಎನ್ನುವುದು ಎಷ್ಟು ಸತ್ಯವೋ ಆ ಒಳ್ಳೆಯತನ ಕೈ ಬಿಡುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಬದುಕಿಗೆ ಭಯ ಮುಖ್ಯವಲ್ಲ. ಭರವಸೆ ಮುಖ್ಯ. ವಿರೂಪಾಕ್ಷಲಿಂಗ ಶಿವಾಚಾರ್ಯರು ತಮ್ಮ ಬದುಕನ್ನು ಭಕ್ತರ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದರು. ರಂಭಾಪುರಿ ಪೀಠದಿಂದ ಧರ್ಮ ಜಾಗೃತಿ ಕಾರ್ಯ ನಿರಂತರ ನಡೆಯುತ್ತಿದೆ. ಸಂಘರ್ಷಗಳು ಕೊನೆಯಾಗಿ ವಿಶ್ವದಲ್ಲಿ ಶಾಂತಿ ನೆಲೆಸಬೇಕಿದೆ. ಮಠಾಧೀಶರು ಧರ್ಮದಿಂದಲೇ ಶಾಂತಿ ನೆಲೆಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಭಕ್ತರ ಬಾಳಿನಲ್ಲಿ ಸಂಸ್ಕಾರ, ಸಂಸ್ಕೃತಿ ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಲಿಂ. ವಿರೂಪಾಕ್ಷಲಿಂಗ ಶಿವಾಚಾರ್ಯರಿಗೆ ಸಲ್ಲುತ್ತದೆ. ವೀರಶೈವ ಧರ್ಮ ಸಂಹಿತೆ ಮತ್ತು ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿರೂಪಾಕ್ಷಲಿಂಗ ಶ್ರೀಗಳು ಶ್ರಮಿಸಿದ್ದನ್ನು ಮರೆಯಲಾಗದು. | ರಂಭಾಪುರಿ ಜಗದ್ಗುರುಗಳು
ಕುಷ್ಟಗಿ: ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಚಳಗೇರಾ ವಿರೂಪಾಕ್ಷಲಿಂಗ ಶಿವಾಚಾರ್ಯರರ ಪುಣ್ಯಸ್ಮರಣೆ ದಶಮಾನೋತ್ಸವ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಡೂರಿನಲ್ಲಿ ಪಕ್ಷ ಸಂಘಟನೆ ಹಾಗೂ ನಾಯಕರ ಒಗ್ಗಟ್ಟಿನಿಂದಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಸಿ.ಪಿ.ಯೋಗೇಶ್ವರರ ಕಾಂಗ್ರೆಸ್ ಸೇರ್ಪಡೆ ವಿಷಯ ಪರಿಣಾಮ ಬೀರಲ್ಲ. ವ್ಯಕ್ತಿ ಬದಲಾವಣೆಯಿಂದ ಪಕ್ಷದ ಅಸ್ತಿತ್ವ ಹಾಗೂ ಸಂಘಟನೆ ಶಕ್ತಿ ಬದಲಾಗುವುದಿಲ್ಲ. ಮುಡಾ ಹಾಗೂ ವಾಲ್ಮೀಕಿ ಹಗರಣಗಳಿಂದಾಗಿ ಕಾಂಗ್ರೆಸ್ ಶಾಸಕರಲ್ಲಿಯೇ ಕಸಿವಿಸಿ ಉಂಟಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಸಿಎಂ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಗ್ಯಾರಂಟಿಗಳಿಂದ ಖಜಾನೆ ಖಾಲಿಯಾಗಿದೆ. ರಸ್ತೆಯ ಗುಂಡಿ ಮುಚ್ಚಿಸಲೂ ಸರ್ಕಾರದ ಬಳಿ ಹಣವಿಲ್ಲ ಎಂದರು.