ಜಿಲ್ಲೆ

ಸ್ವಯಂವ್ಯಕ್ತ ಕ್ಷೇತ್ರಗಳು ಭಗವಂತನ ನೆಲೆ

ಕುಷ್ಟಗಿ: ಸ್ವಯಂವ್ಯಕ್ತ ಕ್ಷೇತ್ರ, ಮೂರ್ತಿಗಳಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.

ಪಟ್ಟಣದ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಮೂರನೇ ದಿನವಾದ ಭಾನುವಾರ ಅನುಗ್ರಹ ಸಂದೇಶದಲ್ಲಿ ಮಾತನಾಡಿದರು.

ಸ್ವಯಂವ್ಯಕ್ತ ಸ್ಥಳಗಳ ಯಾತ್ರೆಯಿಂದ ಪೂರ್ಣ ಫಲ ದೊರಕುತ್ತದೆ. ಕಾಲ್ನಡಿಗೆಯಲ್ಲಿ ಶಾಸ್ತ್ರೋಕ್ತ ವಿಧಿ ವಿಧಾನಗಳ ಮೂಲಕ ಕೈಗೊಳ್ಳುವ ಯಾತ್ರೆ ನಿಜವಾದ ಯಾತ್ರೆ ಎನಿಸಿಕೊಳ್ಳುತ್ತದೆ. ಆಚಾರ್ಯರು ತಮ್ಮ ಶಿಷ್ಯರನ್ನು ಯಾತ್ರೆಗೆ ಕರೆದುಕೊಂಡು ಹೋಗಿ ಪಾಠ ಪ್ರವಚನ ಮಾಡಿ ಅಲ್ಲಿದ್ದವರಿಗೆ ಉಪದೇಶ ಮಾಡಿ ಜತೆಗೆ ಎಲ್ಲ ದೇವತೆಗಳ ಅನುಸಂಧಾನವನ್ನು ಶಿಷ್ಯರಿಗೆ ಮಾಡಿಸಿಕೊಟ್ಟಿರುವುದು ಉಲ್ಲೇಖಾರ್ಹ ಯಾತ್ರೆ ಎಂದು ಹೇಳಿದರು. ಪಲಿಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿದ್ದರು.