ಕುಷ್ಟಗಿ: ಹ್ಯಾಂಡಲ್ ಇಲ್ಲದ ಬೈಕ್ ಏರಿ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುತ್ತಿರುವ ಬಾಗಲಕೋಟೆ ಜಿಲ್ಲೆ ಇಳಕಲ್‌ನ ಈರಣ್ಣ ಕುಂದರಗಿಮಠ ಅವರನ್ನು ಪಟ್ಟಣದಲ್ಲಿ ಮಂಗಳವಾರ ಸ್ವಾಗತಿಸಿ ಬೀಳ್ಕೊಡಲಾಯಿತು.
ರಾಷ್ಟ್ರೀಯ ಹೆದ್ದಾರಿ ಮೂಲಕ ಪಟ್ಟಣ ಪ್ರವೇಶಿಸಿದ ಈರಣ್ಣರನ್ನು ಕಸಾಪ ಪದಾಧಿಕಾರಿಗಳು, ಯುವಕರು ಬೈಕ್ ರ‌್ಯಾಲಿ ಮೂಲಕ ಬರಮಾಡಿಕೊಂಡು ಮಾರುತಿ ವೃತ್ತದಲ್ಲಿ ಸನ್ಮಾನಿಸಿ ಗಜೇಂದ್ರಗಡಕ್ಕೆ ಬೀಳ್ಕೊಟ್ಟರು. ನಾಡು ನುಡಿಯ ಜಾಗೃತಿಗಾಗಿ ಬೈಕ್ ಸವಾರಿ ಹೊರಟಿರುವ ಈರಣ್ಣ ಕುಂದರಗಿಮಠ, ಮಂಗಳವಾರ ಬೆಳಗ್ಗೆ ಬಾಗಲಕೋಟೆಯಿಂದ ಹೊರಟಿದ್ದು, ಗದಗ, ಹುಬ್ಬಳ್ಳಿ ಮಾರ್ಗವಾಗಿ ಹಾವೇರಿ ತಲುಪುವುದಾಗಿ ತಿಳಿಸಿದರು.
ಹಲವು ದಾಖಲೆ: ಉಗ್ರರ ದಾಳಿ ಖಂಡಿಸಿ 2008ರಲ್ಲಿ ಹ್ಯಾಂಡಲ್ ಇಲ್ಲದ ಬೈಕ್ ಏರಿ ಮುಂಬೈ ತಲುಪಿ ಗಮನ ಸೆಳೆದಿದ್ದರು. 2009ರಲ್ಲಿ ಬೆಂಗಳೂರಿನ ವಿಧಾನಸೌಧದಿಂದ ದೆಹಲಿಗೆ ತೆರಳಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡಿದ ನಾಡಿನ ಜನತೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದರು. 2012ರಲ್ಲಿ ಕೈ-ಕಾಲುಗಳನ್ನು ಕತ್ತರಿಯಾಗಿಸಿಕೊಂಡು ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಕಾರು ಚಾಲನೆ ಮಾಡಿ ಲಿಮ್ಕಾ ದಾಖಲೆ ಬರೆದಿದ್ದಾರೆ. 2015ರಲ್ಲಿ ಹ್ಯಾಂಡಲ್ ಇಲ್ಲದ ಬೈಕ್ ಮೂಲಕ ಬೆಂಗಳೂರು ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದು, ಸದ್ಯ ಹಾವೇರಿಯ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ.