ಕುಷ್ಟಗಿ: ಪಟ್ಟಣದ ಎರಡನೇ ವಾರ್ಡ್‌ನ ಬುತ್ತಿಬಸವೇಶ್ವರ ದೇವಸ್ಥಾನದ ರಥಬೀದಿಗೆ ಹೊಂದಿಕೊಂಡು ನಿರ್ಮಿಸಿರುವ ಸಿಸಿ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ರಸ್ತೆ ನಿರ್ಮಿಸಿದ್ದು, ಎನ್.ಜೆ.ಕಿಡ್ಸ್ ಶಾಲೆ ಮುಂಭಾಗದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. ನೀರು ಹರಿದು ಹೋಗಲು ಮಾರ್ಗವಿಲ್ಲದಂತಾಗಿದೆ. ರಸ್ತೆಯ ಅಕ್ಕಪಕ್ಕ ಚರಂಡಿಯನ್ನೂ ನಿರ್ಮಿಸಿಲ್ಲ. ಹೀಗಾಗಿ ಸುಮಾರು ದಿನಗಳವರೆಗೆ ನೀರು ನಿಂತು ದುರ್ವಾಸನೆ ಬೀರಲಾರಂಭಿಸಿದೆ. ಸೊಳ್ಳೆ ಉಪಟಳ ಹೆಚ್ಚಾಗಿದೆ. ಓಡಾಟಕ್ಕೂ ಸಮಸ್ಯೆಯಾಗಿದೆ. ಈ ಸಂಬಂಧ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹಾಗೂ ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಮಗಾರಿ ನಿರ್ವಹಣೆ ಮಾಡಿರುವ ಸದಸ್ಯ ಮೈನುದ್ದೀನ್ ಮುಲ್ಲಾ ಸ್ಪಂದಿಸುತ್ತಿಲ್ಲ ಎಂದು ವಾರ್ಡ್‌ನ ಸೋಮಶೇಖರ ಸೂಡಿ ಇತರರು ಆರೋಪಿಸಿದ್ದಾರೆ.
ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡಿರುವುದರಿಂದ ಚರಂಡಿ ನಿರ್ಮಿಸಲು ಸಾಧ್ಯವಾಗಲಿಲ್ಲ. ಎರಡೂ ಕಡೆ ರಸ್ತೆಗೆ ಹೊಂದಿಕೊಂಡೇ ಮನೆಗಳಿರುವುದರಿಂದ ನೀರು ಸಾಗದಂತಾಗಿದೆ. ಕಾಮಗಾರಿ ವೇಳೆ ನಿವಾಸಿಗಳು ಸಹಕರಿಸಲಿಲ್ಲ.| ಮೈನುದ್ದೀನ್ ಮುಲ್ಲಾ, ಪುರಸಭೆ ಸದಸ್ಯ