ಮಂಡ್ಯ: ಮಂಡ್ಯವನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸೋಣ. ಇದಕ್ಕೆ ಎಲ್ಲ ಇಲಾಖೆಯವರು ಹಾಗೂ ಸಾರ್ವಜನಿಕರು ಕೈಜೋಡಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಟಿ.ಎನ್.ಧನಂಜಯ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಕುಷ್ಠರೋಗ ಬಾಧಿತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಒದಗಿಸಿ ಕುಷ್ಠರೋಗ ಇರುವವರನ್ನ ಗುಣಪಡಿಸಲಾಗುವುದು ಎಂದರು.
ಜ.30ರಿಂದ ಫೆಬ್ರವರಿ 13ರವರೆಗೆ ಜಿಲ್ಲೆಯಲ್ಲಿ ಕುಷ್ಠರೋಗ ಜಾಗೃತಿ ಅಭಿಯಾನ ನಡೆಯಲಿದೆ. ಕುಷ್ಠರೋಗ ಮತ್ತು ಟಿ.ಬಿ ಪ್ರಪಂಚದ ಅತ್ಯಂತ ಹಳೆಯ ಕಾಯಿಲೆ. ಕುಷ್ಠರೋಗಿಗಳು ಕೂಡ ಮನುಷ್ಯರು. ಅವರಲ್ಲಿ ಬೇಧ ಭಾವ ಬೇಡ ಎಂದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮಗಾಂಧಿಜೀ ಅವರು ಹೇಳಿದ್ದರು. ಮಾತ್ರವಲ್ಲದೆ ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಿದರು. ಅವರ ಸೇವೆಯನ್ನು ಪರಿಗಣಿಸಿ ಅವರು ಹುತಾತ್ಮರಾದ ದಿನವನ್ನು ರಾಷ್ಟ್ರೀಯ ಕುಷ್ಠರೋಗ ದಿನ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕುಷ್ಠರೋಗ ಸಂಪೂರ್ಣ ಗುಣಮುಖ ಹೊಂದುವ ಕಾಯಿಲೆ.ಯಾರಲ್ಲಾದರೂ ಅನುಮಾನಸ್ಪಾದ ಮಚ್ಚೆ ಇದ್ದಲ್ಲಿ ಅವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸುತ್ತೇವೆ. ಪ್ರಾರಂಭಿಕ ಅಂತದಲ್ಲೆ ನಾವು ಇದರ ವಿರುದ್ಧ ಹೋರಾಡಬೇಕು ಇಲ್ಲ ಎಂದರೆ ಇತರರಿಗೆ ಹರಡುತ್ತದೆ. ಜಿಲ್ಲೆಯಲ್ಲಿ 21 ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರೆಲ್ಲರಿಗೂ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದೇವೆ. ರೋಗವನ್ನು ಬೇಗ ಪತ್ತೆ ಹಚ್ಚಿದರೇ ಅಂಗವಿಕಲರಾಗುವುದನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಪಿ.ಅಶ್ವಥ್ ಮಾತನಾಡಿ, ಜಿಲ್ಲೆಯಲ್ಲಿ 15 ದಿನ ಜಾಗೃತಿ ಅಭಿಯಾನ ನಡೆಯಲಿದೆ. ಕುಷ್ಠರೋಗದ ಚಿಹ್ನೆ ಇರುವ ಪ್ರತಿಯೊಬ್ಬ ನಾಗರಿಕರನ್ನು ದೈಹಿಕ ತಪಾಸಣೆ ಮಾಡಿ ಕುಷ್ಠರೋಗದಿಂದ ಬಳಲುತ್ತಿರುವುದನ್ನ ತಪ್ಪಿಸಬೇಕಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಡಿ.ಸಂಜಯ್, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ.ಕೆ.ಜಿ.ಭವಾನಿಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಆರ್.ನಾಗರಾಜು, ಡಿಡಿಪಿಐ ಎಸ್.ಟಿ.ಜವರೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಕುಷ್ಠರೋಗ ಭಾದಿತರ ಸಂಘದ ಅಧ್ಯಕ್ಷ ಬಸವರಾಜು ಇತರರಿದ್ದರು.
ಇದೇ ಸಂದರ್ಭದಲ್ಲಿ ಮಂಡ್ಯವನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸುತ್ತೇವೆ ಎಂದು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರತಿಜ್ಞಾ ಬೋಧನೆ ಮಾಡಲಾಯಿತು.