ಜಿಲ್ಲೆ

ಕುಶಾಲನಗರ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಸಂಭ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ತಾಯಿನಾಡು ಮತ್ತು ತಾಯಿ ನುಡಿಯ ಬಗ್ಗೆ ಗೌರವ ಕೊಡುವುದನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜು ಉಪನ್ಯಾಸಕ ಕೆ.ವಿ. ಜಯಕುಮಾರ್ ಅಭಿಪ್ರಾಯಪಟ್ಟರು. ಕುಶಾಲನಗರ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದರು.

ಭಾರತ ದೇಶವನ್ನು ಒಂದು ಮನೆ ಎಂದು ಭಾವಿಸುವುದಾದರೆ ಕರ್ನಾಟಕವನ್ನು ದೇವರಕೋಣೆ ಎಂದು ಗುರುತಿಸಬಹುದು. ಕರ್ನಾಟಕ ದೇಶದ ಅತ್ಯಂತ ಸುರಕ್ಷಿತ ರಾಜ್ಯ. ಹಾಗಾಗಿಯೇ ದೇಶ ವಿದೇಶಗಳಲ್ಲಿ ಮನೆ ಮಾತಾಗಿರುವ ಉದ್ಯಮಗಳು ಇಲ್ಲಿ ನೆಲೆ ಮಾಡಿವೆ. ಆಶ್ರಯ ಅರಸಿ ಬಂದವರಿಗೆ ಆಸರೆ ನೀಡುವ ಆಶ್ರಯ ತಾಣವೂ ಹೌದು.

ಮನೆಯಲ್ಲಿ ಮಕ್ಕಳಿಗೆ ಕನ್ನಡ ಮಾತನಾಡಲು ಅವಕಾಶ ಮಾಡಿಕೊಡಬೇಕು. ಕಾನ್ವೆಂಟ್‌ಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವುದರ ವಿರುದ್ಧ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಬೇಕು. ಇಂಥ ನಿರ್ಬಂಧಗಳಿAದಾಗಿ ಸಂಸ್ಕೃತ ಭಾಷೆ ಮರೆಯಾಗಿದೆ. ಮುಂದೆ ಕನ್ನಡಕ್ಕೂ ಇದೇ ಪರಿಸ್ಥಿತಿ ಬಾರದಂತೆ ಎಚ್ಚೆತ್ತುಕೊಳ್ಳಬೇಕು. 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡದ ಅಂದ ಹೆಚ್ಚಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಶುರುವಾಗದಿದ್ದರೆ ಇಂದು ಕನ್ನಡದ ಸ್ಥಿತಿ ಅಧೋಗತಿ ತಲುಪುತ್ತಿತ್ತು. ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡದ ಹಿರಿಮೆ ಪಸರಿಸುವ ಕೆಲಸ ಆಗಬೇಕಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಮಾತನಾಡಿ ಕರ್ನಾಟಕ ಏಕೀಕರಣ ನಂತರ ರಾಜ್ಯ ಗಣನೀಯ ಬೆಳವಣಿಗೆ ಸಾಧಿಸಿದೆ. ಕನ್ನಡವೇ ನಮ್ಮ ಉಸಿರಾಗಬೇಕು. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕನ್ನಡದೊಂದಿಗೆ ಬೇರೆ ಭಾಷೆಯ ಬಳಕೆಯೂ ಅಗತ್ಯವಿದೆ. ಆದರೆ ಕನ್ನಡಕ್ಕೆ ಆದ್ಯತೆ ಕೊಡಬೇಕಿದೆ. ಕನ್ನಡ ನಾಡು, ನುಡಿ ಬೆಳವಣಿಗೆಗೆ ನಾವೆಲ್ಲಾ ಸಂಕಲ್ಪ ಮಾಡಬೇಕು. ಕನ್ನಡ ನವೆಂಬರ್‌ಗೆ ಸೀಮಿತ ಆಗಬಾರದು ಎಂದರು.

ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಮಾತನಾಡಿ, ಕನ್ನಡ ಮನೆಯ ಭಾಷೆ ಮಾತ್ರವಲ್ಲ ಮನದ ಭಾಷೆಯೂ ಆಗಬೇಕು ಎಂದರು.

ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಕಸಾಪ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ನಾಗೇಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ, ಆರ್‌ಎಫ್‌ಒ ರತನ್ ಕುಮಾರ್, ತಾ.ಪಂ. ಅಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವರದರಾಜು, ಕುಶಾಲನಗರ ಪುರಸಭೆ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಪುಷ್ಪಾ ಮತ್ತಿತರರು ಇದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉ.ರಾ. ನಾಗೇಶ್, ವಿ.ವಿ. ಪ್ರಕಾಶ್, ಸೂರ್ಯತ್ರಿಭುವನ್, ಮಹಾದೇವ್, ಸುಜಾತಾ ಹಾಗೂ ಸುನಿಲ್ ಪೊನ್ನೇಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದಲ್ಲಿ ಆಕರ್ಷಕ ಮೆರವಣಿಗೆ, ಮೈದಾನದಲ್ಲಿ ವಿವಿಧ ತಂಡಗಳ ಪಥಸಂಚಲನ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಈ ತಿಂಗಳ 11 ರಂದು ಕುಶಾಲನಗರದಲ್ಲಿ ಕಸಾಪ ವತಿಯಿಂದ ಏರ್ಪಡಿಸಿರುವ ‘5 ಸಹಸ್ರ ಮಂದಿಯಿAದ ಕನ್ನಡ ಕಂಠ ಗಾಯನ’ ಕಾರ್ಯಕ್ರಮದ ಕರಪತ್ರ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಕರ್ನಾಟಕ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಂಯೋಜನಕ ಟಿ.ಜಿ. ಪ್ರೇಮಕುಮಾರ್ ಹಸಿರು ದೀಪಾವಳಿ ಆಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.