ಕೆ.ಎಸ್. ನಾಗೇಶ್ ಕುಶಾಲನಗರ
ಪ್ರವಾಸೋದ್ಯಮ ಹೆಸರಿನಲ್ಲಿ ಕುಶಾಲನಗರ ಮತ್ತೊಂದು ಗೋವಾ ಮಾಡಲು ಬೀಡಬಾರದು. ಸ್ಥಳೀಯ ಸಂಸ್ಕೃತಿ, ಆಚಾರ- ವಿಚಾರಗಳಿಗೆ ಧಕ್ಕ್ಕೆಯಾಗುತ್ತಿದೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಆತಂಕ ವ್ಯಕ್ತ ಪಡಿಸಿದರು.
ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕುಶಾಲನಗರ ಸಮಸ್ಯೆಗಳ ಬಗ್ಗೆ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಹಣದಾಸೆಗೆ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿವೆ. ಅನಧಿಕೃತ ಹೋಮ್ ಸ್ಟೇಗಳಿಗೆ ಕಡಿವಾಣ ಹಾಕಲೇಬೇಕು.
ಅನೈತಿಕ ಕೇಂದ್ರವಾಗಿ ಕುಶಾಲನಗರ ಸೇರಿದಂತೆ ಕೊಡಗು ಮಾರ್ಪಾಡುಗುತ್ತಿದೆ. ಇಲ್ಲಿ ಎಲ್ಲಾ ತರಹದ ಸೇವೆ ಲಭ್ಯವಿರುವುದರಿಂದ ಪ್ರವಾಸಿಗಳು ಬರುತ್ತಿದ್ದಾರೆ. ಮರ್ಯಾದಸ್ಥ ಹೆಣ್ಣು ಮಕ್ಕಳು ಧೈರ್ಯವಾಗಿ ವಾರಾಂತ್ಯದಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಅಷ್ಟರ ಮಟ್ಟಿಗೆ ಪ್ರವಾಸಿಗರ ಹೊಡೆತ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಆದರೆ, ಅದಕ್ಕೆ ಕೋರ್ಟ್‌ನಿಂದ ತಡೆ ತರಲಾಗಿದೆ. ಯುಜಿಡಿ ಕಾಮಗಾರಿ ಆರಂಭವಾಗಿ ೮ ವರ್ಷ ಕಳೆದರೂ ಪೂರ್ಣವಾಗಿಲ್ಲ. ೩೭ ಕೋಟಿ ರೂ. ಮೊತ್ತದ ಕಾಮಗಾರಿ ಈಗ ೫೦ ಕೋಟಿ ದಾಟಿದೆ. ಕಾಮಗಾರಿ ವಿಳಂಬವಾಗಿರುವುದಕ್ಕೆ ಸಾರ್ವಜನಿಕರ ಆಕ್ರೋಶ ದಿನೇದಿನೇ ಹೆಚ್ಚಾಗುತ್ತಿದೆ ಎಂದರು.
ಸಂವಾದದಲ್ಲಿ ಸಾರಿಗೆ ಬಸ್ ಡಿಪೋ, ಕಲಾ ಮಂದಿರ, ಮಿನಿ ವಿಧಾನಸೌಧ, ಹಾರಂಗಿಯಿಂದ ತರಲು ಉದ್ದೇಶಿಸಿರುವ ೨೪/೭ ಕುಡಿಯುವ ನೀರಿನ ಯೋಜನೆ, ೧೦೦ ಹಾಸಿಗೆಗಳ ಆಸ್ಪತ್ರೆ, ಬಹುಮಹಡಿ ಕಟ್ಟಡ, ಸಾರಿಗೆ ಬಸ್ ನಿಲ್ದಾಣ ಅಭಿವೃದ್ಧಿ, ಪಂಚಾಯಿತಿಯ ವಾಣಿಜ್ಯ ಸಂಕೀರ್ಣ, ಒಳಾಂಗಣ ಕ್ರೀಡಾಂಗಣ, ಬಹುಬೇಡಿಕೆಯ ರೈಲು ಹೀಗೆ ಅಗಬೇಕಿರುವ ಕೆಲಸಗಳ ಬಗ್ಗೆ ಮತ್ತು ನಗರದಲ್ಲಿ ಇರುವ ಸಮಸ್ಯೆ ಗಳ ಬಗ್ಗೆ ವಿಸೃತ್ತವಾದ ಚರ್ಚೆ ನಡೆಯಿತ್ತು. ಬಡಾವಣೆ, ಮನೆ ನಿರ್ಮಾಣಕ್ಕೆ ಬೇಕಾದ ಎನ್‌ಓಸಿ ಕೊಡಲು ಮಾತ್ರ ಯೋಜನಾ ಪ್ರಾಧಿಕಾರ ಸೀಮಿತವಾಗಿದೆ ಎಂದು ಹಿರಿಯ ವಕೀಲ ಆರ್.ಕೆ. ನಾಗೇಂದ್ರ ಬಾಬು ಆಕ್ರೋಶ ಹೊರಹಾಕಿದರು.
ಮನೆಯಲ್ಲಿ ಇರುವ ಸ್ಪೆಟಿಕ್ ತೊಟ್ಟಿ ತುಂಬಿದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ತೆಗಸಬೇಕಾದ ಅನಿವಾರ್ಯತೆಯಲ್ಲಿ ಕುಶಾಲನಗರದ ಜನತೆ ಸಿಲುಕಿಕೊಂಡಿದ್ದಾರೆ. ಪಂಚಾಯಿತಿಯಲ್ಲಿ ಇರುವ ತ್ಯಾಜ್ಯ ಸಂಗ್ರಹ ವಾಹನ ಚಿಕ್ಕದು. ಯುಜಿಡಿ ಕಾಮಗಾರಿ ಪೂರ್ಣ ಅಗದಿರುವುದೇ ಸಮಸ್ಯೆಗೆ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎನ್. ದೇವರಾಜ್ ಹೇಳಿದರು.
೩೦ ಸಾವಿರ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್‌ಗೆ ಮತ್ತು ಇಲಾಖೆಗೆ ಯಾವುದೇ ಭದ್ರತೆಯಿಲ್ಲದಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ನೋಟರಿ ಎಸ್.ಕೆ. ಮಂಜುನಾಥ್ ಬೇಸರ ವ್ಯಕ್ತ ಪಡಿಸಿದರು.
ಚಿಕ್ಕ ಅಳುವಾರ ಗ್ರಾಮದಲ್ಲಿ ಇರುವ ಸ್ನಾತಕೋತ್ತರ ಕೇಂದ್ರಕ್ಕೆ ಹೋಗಲು ತುಂಬಾ ಅನಾನುಕೂಲವಾಗುತ್ತಿದೆ. ಸಾರಿಗೆ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕುಶಾಲನಗರ ಸುತ್ತಮುತ್ತಲಿನ ಗ್ರಾಮಗಳಿಗೆ ಸಿಟಿ ಬಸ್ ವ್ಯವಸ್ಥೆ ಮಾಡಬೇಕು. ಬೇರೆ ಕಡೆಯಿಂದ ಬರುವ ಗ್ರಾಮಾಂತರ ವಿದ್ಯಾರ್ಥಿಗಳಿಗೂ ಅದರಿಂದ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
**
ಮೈಸೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಕುಶಾಲನಗರದೊಂದಿಗೆ ಅವಿನಾಭಾವ ಸಂಬಂಧವಿದೆ. ನಿತ್ಯವೂ ೩ ರಿಂದ ೪ ಸಾವಿರ ಜನ ಕುಶಾಲನಗರ ಕೈಗಾರಿಕಾ ಬಡಾವಣೆಗೆ ಆಗಮಿಸುತ್ತಾರೆ. ಕುಶಾಲನಗರದ ವಾಣಿಜ್ಯ ಕೇಂದ್ರಗಳಲ್ಲಿ ಕೆಲಸ ಮಾಡುವವರು ಕನಿಷ್ಠ ೧೦ ರಿಂದ ೨೦ ಕಿಮೀ ದೂರ ಕ್ರಮಿಸಬೇಕಾಗಿದೆ. ಅವರ್ತಿಯಿಂದ ಕುಶಾಲನಗರಕ್ಕೆ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾದರೆ ಕೇವಲ ೨ ರಿಂದ ೩ ಕಿಮೀ ಆಗುತ್ತೆ. ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕು. ಅವರ್ತಿ ಆರ್.ಮಹದೇವಪ್ಪ, ಅವರ್ತಿ ನಿವಾಸಿ.
**
ಬಿಎಂ ರಸ್ತೆಯಲ್ಲಿ ಇರುವ ಚರಂಡಿಗಳಿಗೆ ಸ್ಲಾಬ್ ಹಾಕಿಸಿ, ಪುಟ್ಪಾತ್‌ಗೆ ಇಂಟರ್ ಲಾಕ್ ಹಾಕಿಸಿದರೆ ಪಾರ್ಕಿಂಗ್ ಸಮಸ್ಯೆಗೆ ಕೊಂಚ ಮಟ್ಟಿ ಗಾದರೂ ಪರಿಹಾರ ದೊರೆಯುತ್ತೆ. ದೇವಿಪ್ರಸಾದ್ ಹೋಟೆಲ್ನಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ತನಕ ಈ ರೀತಿ ಮಾಡಿದರೆ ಉತ್ತಮ. ಗುಣಮಟ್ಟದ ಕಾಮಗಾರಿಗೆ ಅದ್ಯತೆ ನೀಡಬೇಕು. ವಿ.ಸಿ. ಅಮೃತ್, ಉದ್ಯಮಿ, ಕುಶಾಲನಗರ.
**
ಎಂಟು ವರ್ಷ ಕಳೆದಿರುವ ಯುಜಿಡಿ ಕಾಮಗಾರಿ ಮುಗಿದಿಲ್ಲ. ಹಲವು ಕೋಟಿ ಹಲವು ವರ್ಷ ಎನ್ನುವ ಹಾಗೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕ್ಕೊಳಬೇಕು. ವಿಧಾನಸಭೆಯಲ್ಲೂ ಕುಶಾಲನಗರ ಯುಜಿಡಿ ವಿಚಾರ ಪ್ರಸ್ತಾಪವಾಗಿದ್ದರು ಕಾಮಗಾರಿ ಪೂರ್ಣ ವಾಗಿಲ್ಲ. ಹಲವು ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಎತ್ತಂಗಡಿ ಮಾಡಿದರೆ, ಹೊಸದಾಗಿ ಬರುವವರಾದರು ಕೆಲಸ ಮಾಡುತ್ತಾರ ನೋಡಬೇಕು. ಕೆ.ಎನ್. ದೇವರಾಜ್, ಸಾಮಾಜಿಕ ಕಾರ್ಯಕರ್ತ, ಕುಶಾಲನಗರ.
**
ಮೂವತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಜನರು ಕುಡಿಯುವ ನೀರಿನ ಟ್ಯಾಂಕ್ ಭದ್ರತೆಯಿಲ್ಲ. ಯಾರು ಬೇಕಾದರೂ ನೀರಿನ ಟ್ಯಾಂಕ್ ಅನ್ನು ಏನ್ ಬೇಕಾದರೂ ಮಾಡಬಹುದು. ಕುಡಿಯುವ ನೀರಿನ ಭದ್ರತೆಗಾಗಿ ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿ ನೇಮಿಸಿ ಭವಿಷ್ಯದಲ್ಲಿ ಆಗುವ ಅನಾಹುತ ತಪ್ಪಿಸಿ. ಎಸ್.ಕೆ. ಮಂಜುನಾಥ್, ನೋಟರಿ, ಕುಶಾಲನಗರ.
**
ಟ್ರಾಫಿಕ್ ಪೊಲೀಸರು ಕೇವಲ ದಂಡ ವಸೂಲಿಗೆ ಮೀಸಲಾಗಿದ್ದಾರೆ. ಸಂಚಾರಿ ನಿಯಂತ್ರಣ ಮಾಡುವುದನ್ನು ನೋಡಿಯೇ ಇಲ್ಲ. ಜನ ರೊಂದಿಗೆ ಆತ್ಮೀಯವಾಗಿ, ಪ್ರೀತಿಯಿಂದ ವರ್ತಿಸಿ ಕಾನೂನು ಜಾಗೃತಿ ಮೂಡಿಸಲಿ. ಜನಸ್ನೇಹಿ ಪೊಲೀಸರ ಅಗತ್ಯತೆ ಇದೆ. ರಥಬೀದಿಯ ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ಬೇರೆಡೆ ನಿಲ್ಲಿಸಿ, ಗ್ರಾಹಕರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತೆ. ಅಮೃತೇಶ್, ಹೈಕೋರ್ಟ್ ವಕೀಲರು.
**
ಕುಶಾಲನಗರ ಪಟ್ಟಣ ಪಂಚಾಯಿತಿಯ ಬಹು ನಿರೀಕ್ಷಿತ ವಾಣಿಜ್ಯ ಸಂಕೀರ್ಣ ಉದ್ಘಾಟನೆಗೆ ಇರುವ ಅಡೆತಡೆ ತಕ್ಷಣ ನಿವಾರಿಸಬೇಕು.
ಇದು ಸಾಧ್ಯವಾದರೆ ಆ ಕಟ್ಟಡದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದೆ. ಊರಿಗೂ ಒಂದು ಚೆಂದದ ಲುಕ್ ಬರುತ್ತೆ. ಜಯಪ್ರಕಾಶ್, ಜಿಲ್ಲಾಧ್ಯಕ್ಷರು, ಡಾ.ಬಿ.ಆರ್. ಅಂಬೇಡ್ಕರ್ ಜನಪರ ವೇದಿಕೆ.
**
ತಾಲೂಕು ಘೋಷಣೆಯಾಗಿ ವರ್ಷಗಳು ಕಳೆದರೂ, ತಾಲೂಕು ಮಟ್ಟದ ಕಚೇರಿಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಇಲ್ಲ. ಈಗಲೂ ಸಾಕಷ್ಟು ಕೆಲಸಗಳಿಗೆ ಸೋಮವಾರಪೇಟೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಶಾಸಕ ರು ಗಮನ ಹರಿಸಿದರೆ ಸೂಕ್ತ. ವಿ.ಎಸ್.ಅನಂದಕುಮಾರ್, ಕುಶಾಲನಗರ ಪಪಂ ಸದಸ್ಯರು.
**
ಊರಿನ ಅಭಿವೃದ್ಧಿಗೆ ಜನಪ್ರತಿನಿಧಿಗಳನ್ನು ಅವಲಂಬಿಸುವ ಬದಲು, ಸಮಾನ ಮನಸ್ಕರರ ತಂಡ ರಚಿಸಿಕೊಂಡು ವಿಧಾನಸೌಧ ತಲುಪಿದರೆ ಎಲ್ಲಾ ಕೆಲಸ ಆಗುತ್ತವೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಕ್ಕೆ ಅಗಬೇಕಿರುವ ಕೆಲಸ ಪಟ್ಟಿ ಮಾಡಿಕೊಂಡು ಪ್ರಯತ್ನ ಮಾಡುವುದು ಸೂಕ್ತ. ಜ್ಞಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಆರ್.ಕೆ. ನಾಗೇಂದ್ರ ಬಾಬು, ಹಿರಿಯ ವಕೀಲರು, ಕುಶಾಲನಗರ.