ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವಿ.ಪಿ.ಶಶಿಧರ್ ಉದ್ಘಾಟಿಸಿದರು. ಬಿಇಒ ಮಂಜೇಶ್, ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಬಿ.ಎನ್.ಪುಷ್ಪಾ, ಸಿಸ್ಟರ್ ಸ್ಪಂದನಾ ಇತರರು ಹಾಜರಿದ್ದರು. 
ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಅವಶ್ಯ

ರವಿಕುಮಾರ್ ಪಿ. ಕೆ

ಕುಶಾಲನಗರ: ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಗಿದ್ದು, ಅವುಗಳನ್ನು ಹೊರಹೊಮ್ಮಿಸಲು ಇಂತಹ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ತರಗತಿಯಲ್ಲಿನ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಕ್ಷೇತ್ರಗಳತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ತಿಳಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಫಾತೀಮಾ ಕಾನ್ವೆಂಟ್‌ನಲ್ಲಿ ಬುಧವಾರ ಆಯೋಜಿಸಿದ್ದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನೃತ್ಯ, ಜನಪದ ಗೀತೆಗಳು ಸೇರಿದಂತೆ ಇನ್ನೂ ಮುಂತಾದ ನಮ್ಮ ದೇಶೀಯ ಕಲೆಗಳನ್ನು ಉಳಿಸುವ ಸಲುವಾಗಿ ಹಾಗೂ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಗುರುತಿಸುವುದೇ ಈ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ ಮಾತನಾಡಿ, ಪಠ್ಯದ ಜತೆಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಪ್ರತಿಭಾವಂತರಾಗಲು ಸಾಧ್ಯವಾಗುತ್ತದೆ ಎಂಬ ಆಶಯದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇದನ್ನು ಗುರುತಿಸಿ ಹೊರತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪ್ರತಿಭಾ ಕಾರಂಜಿ, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟದಂತಹ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಲು ಸಹಕರಿಸಬೇಕು ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಅಭಿನಯ ಗೀತೆ, ಛದ್ಮವೇಷ, ಚಿತ್ರಕಲೆ, ಮಣ್ಣಿನ ಮಾದರಿ ರಚನೆ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ತಮ್ಮ ಪ್ರತಿಭೆಯನ್ನು ಹೊರ ಹಾಕಿದರು. ತೀರ್ಪುಗಾರರಾಗಿ ರಜಿನಿ, ಮಂಗಳಗೌರಿ, ತಾರಾಮಣಿ, ಇಂದ್ರಾಣಿ ಮತ್ತಿತರರು ಕಾರ್ಯನಿರ್ವಹಿಸಿದರು.

ಸಮನ್ವಯ ಅಧಿಕಾರಿ ಹೇಮಂತ್, ಫಾತೀಮಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಸ್ಪಂದನಾ, ಸಿಸ್ಟರ್ ಜಸ್ವಿನಾ, ಸಿಸ್ಟರ್ ತೆರೆಸ್ ಆನ್, ಸರ್ಕಾರಿ ಪದವಿ ಪೂರ್ವ ಕಾಲೇಜು ಫ್ರೌಢಶಾಲೆಯ ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಮೂಕಾಂಬಿಕಾ ಫ್ರೌಡಶಾಲೆಯ ಮುಖ್ಯಶಿಕ್ಷಕ ಗೋಪಾಲ್, ಸರ್ಕಾರಿ ಬಾಲಕಿಯರ ಫ್ರೌಢಶಾಲೆಯ ಮುಖ್ಯಶಿಕ್ಷಕಿ ಪುಷ್ಪಾ, ಸಂತೋಷ್ ಕುಮಾರ್ ಮತ್ತಿತರರು ಹಾಜರಿದ್ದರು.