ಜಿಲ್ಲೆ

ನೇಕಾರ ಸಮಾಜದಿಂದ ಪ್ರತ್ಯೇಕ ಜಾತಿ ಗಣತಿ,  ಕುರುಹಿನಶೆಟ್ಟಿ ಸಮಾಜ ಅಭಿವೃದ್ಧಿ ಸಂಘದ ಸಭೆಯಲ್ಲಿ ಅಧ್ಯಕ್ಷರ ಹೇಳಿಕೆ

ಹುಬ್ಬಳ್ಳಿ: ನೇಕಾರ ಸಮುದಾಯದ ಸ್ಥಿತಿಗತಿ ದಾಖಲೀಕರಣಕ್ಕಾಗಿ ಒಕ್ಕೂಟದಿಂದ ಪ್ರತ್ಯೇಕ ಜಾತಿ ಗಣತಿ ನಡೆಸಲಾಗುತ್ತಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯಲಿದೆ. ಇದರಲ್ಲಿ ಸಮುದಾಯದ ಜನರು ಭಾಗವಹಿಸಬೇಕು ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಹೇಳಿದರು.

ಇಲ್ಲಿಯ ನವನಗರದ ಗಣೇಶ ಪ್ರಸಾದ ಸಭಾಭವನದಲ್ಲಿ ಭಾನುವಾರ ಕುರುಹಿನಶೆಟ್ಟಿ (ನೇಕಾರ) ಸಮಾಜದ ಅಭಿವೃದ್ಧಿ ಸಂಘದ ತೃತೀಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಮತ್ತು ಧಾರವಾಡ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಾತಿ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೇಕಾರ ಸಮಾಜದವರು 9.28 ಲಕ್ಷ ಜನರಿದ್ದಾರೆ ಎಂದು ಕಾಂತರಾಜ ವರದಿಯಲ್ಲಿ ತಿಳಿಸಲಾಗಿದೆ. ವಾಸ್ತವವಾಗಿ 45ರಿಂದ 50 ಲಕ್ಷ ನೇಕಾರರ ಜನಸಂಖ್ಯೆ ಇದೆ. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡಿ ಸ್ಥಳಿಯ ಅಧ್ಯಕ್ಷರಿಗೆ ಅಲ್ಲಿನ ನಮ್ಮ ಸಮುದಾಯದ ಪ್ರತಿಯೊಂದು ಮನೆಗಳ ಸಮೀಕ್ಷೆ ಮಾಡಿ, ಸರ್ಕಾರದ ಗಮನಕ್ಕೆ ತರಲಾಗುವುದು. ಇದಕ್ಕೆ ಜಿಲ್ಲೆಯ ಸಮುದಾಯದ ಜನರು ಬೆಂಬಲಿಸಬೇಕು ಎಂದರು.

ಸನ್ಮಾನ:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಟಾಪರ್ ಬಿಂದು ಸುಭಾಸ್ ಕೋಣನ ತಂಬಗಿ, ಸೃಷ್ಟಿ ಶಿವಾನಂದ ಲಕ್ಷ್ಮೇಶ್ವರ ಹಾಗೂ ಪಿಯುಸಿ ಟಾಪರ್ ಅಮೂಲ್ಯಾ ಎಂ. ಸೀರಿ, ಅಮೋಘ ಅಶೋಕ ನೇಕಾರ, ಪ್ರೇಮ ಶಂಕರ್ ಮದ್ಲಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರು, ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಗುರುತಿಸಿ ಚೀಟಿ ಬಿಡುಗಡೆಗೊಳಿಸಲಾಯಿತು.

ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಬೆಳಗಾವಿ ವಿಭಾಗದ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಎಂ.ಪಿ. ಶಿವಕುಮಾರ್, ಧಾರವಾಡ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಎಂ.ಬಿ. ರೋಣದ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಹತಿರ್, ನವನಗರ ನೇಕಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿ.ಬಿ. ಚವಡಿ, ಉಪಾಧ್ಯಕ್ಷ ಕೆ.ಎಸ್. ಡೊಳ್ಳಿನ, ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷೆ ಮಾಲಾ ಪಾಗಿ ಇತರರಿದ್ದರು.

ಬಿ.ಎಸ್. ಬಾವೂರ 2024ರ ಸಭೆಯ ನಿರ್ಣಯಗಳನ್ನು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಆರ್. ಗುಡ್ಡಾನವರ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಎಸ್.ಬಿ. ದಿಬ್ಬದಮನಿ ವಾರ್ಷಿಕ ವರದಿ ಮಂಡಿಸಿದರು. ನಂದಿನಿ ಕೋಳಿವಾಡ, ಗೀತಾ ಓಂಕಾರಿ ನಿರೂಪಿಸಿದರು.