ಕುರುಗೋಡು: ತುಂಗಭದ್ರಾ ಜಲಾಶಯದ 10ನೇ ಡಿಷ್ಟ್ರಿಬ್ಯುಟ್ ಕಾಲುವೆಗೆ ಹೆಚ್ಚಿನ ನೀರು ಹರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ರೈತರು ಪಟ್ಟಣದ ನೀರಾವರಿ ಇಲಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಸಮಸ್ಯೆ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬಗೆಹರಿಯದ ಕಾರಣ ಮತ್ತೊಮ್ಮೆ ಅವರ ಬಳಿ ಬರುವಂತಾಗಿದೆ. ಈ ವರ್ಷ ಮುಂಗಾರು ಮಳೆ ವಿಳಂಬದಿಂದ ಬಿತ್ತನೆ ಕಾರ್ಯ ತಡವಾಗಿದೆ. ಈ ಭಾಗದ ರೈತರು, ಜೀವನಾಡಿಯಾದ ತುಂಗಭದ್ರಾ ಜಲಾಶಯ ತುಂಬುವುದನ್ನೇ ಕಾಯುತ್ತಿದ್ದರು.
ಇದೀಗ ಜಲಾಶಯದಲ್ಲಿ ನೀರು ಲಭ್ಯವಿದ್ದರೂ ಕಾಲುವೆಗೆ ಹರಿಸಿಲ್ಲ. ಪ್ರತಿವರ್ಷ ಸಕಾಲಕ್ಕೆ ಮಳೆ ಬರುತ್ತಿದ್ದರಿಂದ ಕಾಲುವೆಯ ನೀರು ಬರುವುದು ತಡವಾದರೂ ರೈತರು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಗಂಭೀರವಾಗಿದೆ. ಕೆಲವೇ ದಿನಗಳಲ್ಲಿ ಭತ್ತ ನಾಟಿ ಮಾಡುವುದು ಒಂದೆಡೆಯಾದರೆ, ಇನ್ನೊಂದೆಡೆ ಈಗಾಗಲೇ ನಾಟಿ ಮಾಡಿದ ಬೆಳೆಗೆ ನೀರಿನ ಕೊರತೆ ಎದುರಾಗಿದೆ.
ಹೀಗಾಗಿ ಶೀಘ್ರವೇ 10ನೇ ಡಿಷ್ಟ್ರಿಬ್ಯುಟ್ ಕಾಲುವೆ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಿಗೆ ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿಸಬೇಕೆಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಸದಸ್ಯ ರಾಮಾಂಜನಿ, ರೈತರಾದ ಪಾಂಡುರಂಗ, ಐ.ಬಾಬುರೆಡ್ಡಿ, ನಜೀರ್, ಶಿವಲಿಂಗ, ಪುರುಷೋತ್ತಮ ರೆಡ್ಡಿ, ಉಮೇಶ್, ಬಸವರಾಜ ಇತರರಿದ್ದರು.