ಜಿಲ್ಲೆ

ಕರೊನಾ ಮುಂಜಾಗ್ರತೆಯೊಂದಿಗೆ ಶಾಲೆ ಆರಂಭ: ಕುರುಗೋಡಿನಲ್ಲಿ ಮಕ್ಕಳಿಗೆ ಹೂ, ಚಾಕೋಲೆಟ್ ನೀಡಿ ಸ್ವಾಗತ ಕೋರಿದ ಗುರುವೃಂದ

ಕುರುಗೋಡು: ಕರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಟ್ಟಣದಲ್ಲಿ ಶುಕ್ರವಾರ 5 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎರಡು ಸರ್ಕಾರಿ ಪ್ರೌಢಶಾಲೆಗಳನ್ನು ಆರಂಭಿಸಲಾಯಿತು.

ಗುರುವಾರವೇ ಶಿಕ್ಷಕರು ಹಾಗೂ ಸಿಬ್ಬಂದಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಿದ್ದರು. ಅಲ್ಲದೆ ಶಾಲಾ ಆವರಣದಲ್ಲಿ ರಂಗೋಲಿ ಬಿಡಿಸಿ ಬಣ್ಣ ತುಂಬಲಾಗಿತ್ತು. ಶಾಲೆಯ ಪ್ರವೇಶದ್ವಾರಕ್ಕೆ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಲ್ಲಿ ಕರೊನಾ ಭಯ ಹೋಗಲಾಡಿಸಿ ಆತ್ಮ ವಿಶ್ವಾಸ ತುಂಬಲು ಅಗತ್ಯ ಕ್ರಮಕೈಗೊಳ್ಳಲಾಗಿತ್ತು.

ಶುಕ್ರವಾರ ಹೊಸ ವರ್ಷದ ಜತೆಗೆ ಹೊಸ ಹುರುಪಿನೊಂದಿಗೆ ಬಂದ ಮಕ್ಕಳು ಅಲಂಕೃತಗೊಂಡ ಶಾಲೆಗಳನ್ನು ಕಂಡು ಖುಷಿಪಟ್ಟರು. ಭಯ, ಆತಂಕದೊಂದಿಗೆ ಮಾಸ್ಕ್ ಧರಿಸಿ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಶಾಲೆ ಪ್ರವೇಶ ದ್ವಾರದಲ್ಲೇ ನಿಂತು ಥರ್ಮಲ್ ಸ್ಕ್ರೀನಿಂಗ್ ಮಾಡಿ ಹೂ ಹಾಗೂ ಚಾಕೋಲೆಟ್ ನೀಡಿ ಸ್ವಾಗತ ಕೋರುವ ಮೂಲಕ ನಿಮ್ಮ ಜತೆ ನಾವಿದ್ದೇವೆ ಎಂಬ ಧೈರ್ಯ ತುಂಬಿದರು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಸಂಭ್ರಮ ಮನೆಮಾಡಿತ್ತು.