ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ರೈತರ ಹಾಗೂ ಕಂಪನಿಗಳ ಸಭೆ ನಡೆಯಿತು. ತಹಸೀಲ್ದಾರ್ ನರಸಪ್ಪ , ಕೃಷಿ ಇಲಾಖೆ ಎಡಿ ವಸಂತ ಕುಮಾರ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಉಪಾಧ್ಯಕ್ಷ ಹೇಮರೆಡ್ಡಿ, ಸದಸ್ಯರಾದ ವೆಂಕಟರೆಡ್ಡಿ, ರಾಜಶೇಖರ್ ಗೌಡ ಗುಡಿ ಸ್ವಾಮಿ, ಆಗಲೂರು ಎರ‌್ರಿಸ್ವಾಮಿ, ಹನುಮಂತ, ಪಾಲಕ್ಷಿ, ದಮ್ಮೂರು ಶಂಕ್ರಪ್ಪ ಇತರರಿದ್ದರು. 
ಜಿಲ್ಲೆ

ಕಳಪೆ ಬೀಜದಿಂದ ರೈತರಿಗೆ ಆರ್ಥಿಕ ಸಂಕಷ್ಟ

ಕುರುಗೋಡು: ಕಳೆಪೆ ಬೀಜ ಬಿತ್ತನೆಯಿಂದ ಬೆಳೆ ಹಾಳಾಗಿದೆ. ನಾಲ್ಕು ತಿಂಗಳಿಂದ ಎಫ್‌ಪಿಒ ಕಚೇರಿಗೆ ಅಲೆದಾಡಿದರೂ ಪರಿಹಾರದ ಬಿಡುಗಾಸು ಸಿಗುತ್ತಿಲ್ಲ. ಇತ್ತ ಮಾಡಿದ ಸಾಲಕ್ಕೆ ಬಡ್ಡಿ ಬೆಳೆಯುತ್ತಿದೆ, ಜೀವನವೇ ಸಾಕಾಗಿದೆ ಎಂದು ತೊಗರಿ ಬೆಳೆದ ರೈತರು ತಹಸೀಲ್ದಾರ್ ನರಸಪ್ಪಗೆ ಅವಲೊತ್ತುಕೊಂಡರು.

ರೈತರ ದೂರಿನ ಮೇರೆಗೆ ತಾಲೂಕು ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಸೋಮವಾರ ರೈತರು ಹಾಗೂ ಎಫ್‌ಬಿಒ ಕಂಪನಿ ಮಾಲೀಕರ ಸಭೆ ನಡೆಸಿದರು.

ಕೋಳೂರು, ಮದಿರೆ, ವದ್ದಟ್ಟಿ, ಬೈಲೂರು, ಶ್ರೀನಿವಾಸ್ ನಗರ, ಕಲ್ಲುಕಂಬ ಗ್ರಾಮದ ರೈತರು ಸುಮಾರು 180 ಎಕರೆ ಪ್ರದೇಶದಲ್ಲಿ ಎಫ್‌ಪಿಒ ಕಂಪನಿಯಲ್ಲಿ ಬೆಸ್ಟ್ ಬಯೋನೆಕ್ಸ್ ಕ್ರಾಪ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಕೆಂಪು ತೊಗರಿ ಖರೀದಿಸಿ ಬಿತ್ತನೆ ಮಾಡಿದ್ದರು. ಬೀಜ ಕಳೆಪೆ ಆಗಿದ್ದರಿಂದ ತೊಗರಿ ಕಾಳು ಕಟ್ಟದೆ ಸಂಪೂರ್ಣ ನಷ್ಟವಾಗಿದೆ.

ಅಲ್ಲದೆ ವಿಜ್ಞಾನಿಗಳ ತಂಡ ಕೂಡ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಪ್ರದೇಶಕ್ಕೆ ಬೀಜ ಯೋಗ್ಯವಲ್ಲ ಎಂದು ತಿಳಿಸಿದೆ ಎಂದು ರೈತರು ತಹಸೀಲ್ದಾರ್ ಗಮನಕ್ಕೆ ತಂದರು. ಕೂಡಲೇ ಪ್ರತಿ ಬೀಜದ ಪ್ಯಾಕೆಟ್‌ಗೆ ಪರಿಹಾರ ನೀಡುವ ಜತೆಗೆ ಬೆಸ್ಟ್ ಬಯೋನೆಕ್ಸ್ ಕ್ರಾಪ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ರೈತರು ಗ್ರಾಹಕರ ಕೋರ್ಟ್ ಗೆ ಹೋಗಲು ಅಗತ್ಯ ನೆರವು ನೀಡಬೇಕು. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಫ್‌ಬಿಒ ಕಂಪನಿಗೆ ನರಸಪ್ಪ ಸೂಚಿಸಿದರು.