ಜಿಲ್ಲೆ

ಕುರುಗೋಡಿನಲ್ಲಿ ಸರಣಿ ಅಪಘಾತ: ಬ್ಯಾಂಕ್ ಉದ್ಯೋಗಿಗಳಾಗಿದ್ದ ದಂಪತಿ ಸಾವು, ಬೈಕ್ ಸವಾರನಿಗೆ ತೀವ್ರ ಗಾಯ

ಕುರುಗೋಡು: ಬೈಕ್ ಮತ್ತು ಸ್ಕೂಟಿಗೆ ಕಾರು ಡಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿಗಳಾಗಿದ್ದ ದಂಪತಿ ಮಂಗಳವಾರ ಸಾವಿಗೀಡಾಗಿದ್ದಾರೆ. ಸಮೀಪದ ಸಿದ್ದಮ್ಮನಹಳ್ಳಿ-ಕುಡತಿನಿ ಮಾರ್ಗದಲ್ಲಿ ಘಟನೆ ನಡೆದಿದ್ದು, ಸ್ಕೂಟಿ ಸವಾರ ಯುಸೂಫ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೀವ್ರ ಗಾಯಗೊಂಡ ಮೃತನ ಪತ್ನಿ ಶೇಕ್ ಫಿರೋಜಾ (34) ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾರೆ. ಇವರಿಬ್ಬರು ಎಸ್‌ಬಿಐ ನೌಕರರಾಗಿದ್ದು, ಮೂಲತಃ ಆಂಧ್ರದ ನೆಲ್ಲೂರು ಹಾಗೂ ಉರವಕೊಂಡದವರು.

ಬೈಕ್ ಸವಾರ ಗಾದಿಲಿಂಗಪ್ಪಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೇಣಿ ವೀರಾಪುರದ ಸಹೋದರಿ ಮನೆಗೆ ದಂಪತಿ ಹೋಗುತ್ತಿದ್ದರು. ಸಂಡೂರಿನಿಂದ ಕಾರ್ತಿಕ್ ಎಂಬುವವರು ಕಾರು ಚಲಾಯಿಸಿಕೊಂಡು ಬರುವಾಗ ಈ ಅಪಘಾತ ಸಂಭವಿಸಿದೆ.

ಬೈಕ್ ಸವಾರ ಮೃತ: ಇನ್ನೊಂದು ಪ್ರಕರಣದಲ್ಲಿ ಕುಡತಿನಿ ರೈಲ್ವೆ ಗೇಟ್ ಹತ್ತಿರ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಸವಾರ ಹೊನ್ನೂರ್ ಸಾಬ್ (38) ಸ್ಥಳದಲ್ಲೇ ಮಂಗಳವಾರ ಮೃತಪಟ್ಟಿದ್ದಾರೆ. ಓರ‌್ವಾಯಿ ಗ್ರಾಮಕ್ಕೆ ಹೊನ್ನೂರ್ ಸಾಬ್, ಕುಡತಿನಿಗೆ ಹೋಗುವಾಗ ಅಪಘಾತ ಜರುಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.