ಕುರುಗೋಡು: ಮಹಿಳೆಯರ ಭಾವನೆಗೆ ಒತ್ತು ನೀಡುವ ಜತೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸೋಮಸಮುದ್ರ ಮಠ ಮಾಡುತ್ತಿದೆ ಎಂದು ಹೊಸಪೇಟೆ-ಬಳ್ಳಾರಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಜಗದ್ಗುರು ಕೊಟ್ಟೂರು ಸ್ವಾಮಿ ಗುರುಪರಂಪರೆ ಶಾಖಾ ವಿರಕ್ತಮಠದಲ್ಲಿ ಗುರುವಾರ ಸಿದ್ಧಲಿಂಗ ದೇಶಿಕರ ನಿರಂಜನ ಚರಪಟ್ಟಾಧಿಕಾರ ಪ್ರಯುಕ್ತ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ದೇಶದ ಅಭಿವೃದ್ಧಿಯಲ್ಲಿ ಸ್ತ್ರೀಯರ ಪಾತ್ರ ಹಿರಿದಾಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರ, ನಡೆ, ನುಡಿ ಕಲಿಸುವ ಜತೆಗೆ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ನಾವಷ್ಟೇ ಸಂತೋಷವಾಗಿದ್ದರೆ ಸಾಲದು. ಅಕ್ಕ-ಪಕ್ಕದವರಿಗೆ ಅದನ್ನು ಹಂಚಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರಿಗೆ ಉಡಿ ತುಂಬಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠ ಹಾಗೂ ಹಾನಗಲ್ ವಿರಕ್ತಮಠದ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧ ರಾಜ ಯೋಗೀಂದ್ರ ಸ್ವಾಮೀಜಿ, ಸಿದ್ದಲಿಂಗ ದೇಶಿಕ ಸ್ವಾಮೀಜಿ, ದರೂರು ಗ್ರಾಮದ ಸಂಗಮ ಬಸವೇಶ್ವರ ವಿರಕ್ತ ಮಠದ ಕೊಟ್ಟೂರು ಸ್ವಾಮೀಜಿ, ಗರಗ ನಾಗಲಾಪುರ ಕುರುಗೋಡಿನ ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಸ್ವಾಮೀಜಿ, ಲಿಂಗ ನಾಯಕನಹಳ್ಳಿ ಮಠದ ನಿರಂಜನ ದೇವರು, ಜಗದ್ಗುರು ಕೊಟ್ಟೂರು ಸ್ವಾಮಿ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ, ಶ್ರೀಧರಗಡ್ಡೆಯ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ವಿರಕ್ತಮಠದ ಮರಿಕೊಟ್ಟೂರು ದೇಶಿಕರು, ಸಂಗನಾಳ ಅನ್ನದಾನೇಶ್ವರ ಶಾಖಾ ಮಠದ ವಿಶ್ವೇಶ್ವರ ದೇವರು ಇದ್ದರು.