ಕುರುಗೋಡು: ಯಾವುದೇ ಫಲಾಪೇಕ್ಷೆ ಇಲ್ಲದೆ ಒಗ್ಗಟ್ಟಾಗಿ ಹೋರಾಟ ಮಾಡುವುದೇ ಸಂಘಟನೆಗಳ ಧ್ಯೇಯವಾಗಿರಲಿ ಎಂದು ಬಾಬು ಜಗಜೀವನರಾಮ್ ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಬಣ) ಸಂಘಟನಾ ಸಭೆಯಲ್ಲಿ ಮಾತನಾಡಿದರು.
1983ರಲ್ಲಿ ಜಿಲ್ಲೆಯ ಚೇಳ್ಳಗುರ್ಕಿಎರ‌್ರಿತಾತನವರ ಮಠಕ್ಕೆ ಅಸೃಶ್ಯರ ಪ್ರವೇಶ, 1987ರಲ್ಲಿ ಕಲ್ಲುಕಂಭ ಮತ್ತು ಮುದ್ದಟನೂರು ಗ್ರಾಮದಲ್ಲಿ ಆಚರಣೆಯಲ್ಲಿದ್ದ ಅನಿಷ್ಟ ಓಕಳಿ ಹಬ್ಬ ನಿಷೇಧ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಯಾದ ಘಟನೆ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕಾರಣವಾಯಿತು. ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವ ಮೊದಲು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲ ಜಾತಿಯ ಬಡವರ ಪರ ಹೋರಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಜಿಲ್ಲಾ ಸಂಚಾಲಕ ಜಿ. ಗೋವರ್ಧನ ಮಾತನಾಡಿ, ಸ್ವಾರ್ಥಕ್ಕಾಗಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವ ಬದಲು ಯುವಕರಲ್ಲಿ ಜಾಗೃತಿ ಮೂಡಿಸಲು ಸದಾ ಕ್ರಿಯಾಶೀಲರಾಗಿರಬೇಕು ಎಂದರು.
ಸಂಘಟನೆ ರಾಜ್ಯ ಸಮಿತಿ ಸದಸ್ಯ ಕೊಡ್ಲೆ ಮಲ್ಲಿಕಾರ್ಜುನ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಮುಖಂಡರಾದ ಜಡೆಪ್ಪ ಮತ್ತು ರಾಮಣ್ಣ ಮಾತನಾಡಿದರು. ಮುಖಂಡರಾದ ರಾಜಣ್ಣ, ನಟರಾಜ ಗೌಡ, ಮಲ್ಲಪ್ಪ ಮತ್ತು ಹೊನ್ನೇಶ ಇದ್ದರು.
ಪದಾಧಿಕಾರಿಗಳು: ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಚಾಲಕರಾಗಿ ಗುತ್ತಿಗನೂರು ಶೇಖಣ್ಣ, ಸಹ ಸಂಚಾಲಕರಾಗಿ ಸೋಮಸಮುದ್ರ ತಿಪ್ಪಯ್ಯ, ಗೆಣಿಕೆಹಾಳು ಮಾರೇಶ, ವದ್ದಟ್ಟಿ ಹುಲುಗಪ್ಪ, ಹೊಸ ಯಲ್ಲಾಪುರ ಪ್ರಕಾಶ, ಕಲ್ಲುಕಂಭ ಮಲ್ಲಿಕಾರ್ಜುನ ಮತ್ತು ಸಿದ್ದಮ್ಮನಹಳ್ಳಿ ದೇವಪುತ್ರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾದನಹಟ್ಟಿ ಹನುಮಂತಪ್ಪ, ಕುರುಗೋಡು ರುದ್ರಪ್ಪ, ಕಲ್ಲುಕಂಭ ದುರುಗಪ್ಪ, ಸಿಂಧಿಗೇರಿ ಬಸಪ್ಪ, ಬಸಾಪುರ ಹುಲೆಪ್ಪ, ತಾಲೂಕು ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ಬಸಾಪುರ ಗಣೇಶ ಮತ್ತು ಕುರುಗೋಡು ನಗರ ಸಂಚಾಲಕರಾಗಿ ಕುರುಗೋಡು ಅಂಬರೀಷ್ ಅವರನ್ನು ಆಯ್ಕೆ ಮಾಡಲಾಯಿತು.