ಜಿಲ್ಲೆ

ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ರಥೋತ್ಸವ ನಾಳೆ, ಆರಾಧ್ಯ ದೈವನ ದರ್ಶನಕ್ಕೆ ಬರುತ್ತಿದ್ದಾರೆ ಭಕ್ತರ ದಂಡು


ಕುರುಗೋಡು: ಹೋಳಿ ಹುಣ್ಣಿಮೆ ದಿನವಾದ ಸೋಮವಾರ ಪಟ್ಟಣದ ಆರಾಧ್ಯ ದೈವ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಜಾತ್ರೆ ನಿಮಿತ್ತ ಮಾ.1 ರಿಂದ ಎಂಟು ದಿನಗಳ ಕಾಲ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ಮತ್ತು ನೀಲಮ್ಮ ತಾಯಿಗೆ ಕಂಕಣಧಾರಣೆ, ನಾಗಾಭರಣ, ನವಿಲು, ಸಿಂಹ, ಅಶ್ವ, ಬಸವಣ್ಣ ವಾಹನೋತ್ಸವ, ನೀಲಮ್ಮ ತಾಯಿಗೆ ಉಡಿ ತುಬುಂವ ಕಾರ್ಯಕ್ರಮ ಹಾಗೂ ಭಾನುವಾರ ಗಜ ವಾಹನೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಾ.9ರಂದು ಸಂಜೆ 5.30ಕ್ಕೆ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಮರು ದಿನ ಮಂಗಳವಾರ ರಾತ್ರಿ ಎದುರು ಬಸವಣ್ಣ ಹತ್ತಿರ ಲಂಕೆ ಸುಡುವುದು ಹಾಗೂ ಶ್ರೀ ನೀಲಮ್ಮ ತಾಯಿಯ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನೆರವೇರಲಿದೆ. ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಕುರುಗೋಡಿನತ್ತ ಆಗಮಿಸುತ್ತಿದ್ದಾರೆ.

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಸಮಿತಿಯಿಂದ ಸ್ವಾಮಿ ದರ್ಶನಕ್ಕೆ ಸಾಮಾನ್ಯ ಹಾಗೂ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ನೀರು ಹಾಗೂ ಅನ್ನ ಪ್ರಸಾದ ವಿತರಣೆ ಸೇರಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ್ ರಾವ್ ಮಾಹಿತಿ ನೀಡಿದರು.

ಧೂಳುಗಾಯಿ ಹೊತ್ತು ತರುವ ರಸ್ತೆಯಲ್ಲಿ ಸೋಮಲಾಪುರ, ಕೆರೆಕೆರೆ, ಮುಷ್ಟಗಟ್ಟೆ ಗ್ರಾಮಸ್ಥರಿಗೆ ವಿಶೇಷ ಬಿಗಿ ಭದ್ರತೆ ಒದಗಿಸಲಾಗುವುದು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಸಿಪಿಐ ಚಂದನ್ ಗೋಪಾಲ್ ತಿಳಿಸಿದರು.