ಎಚ್.ವೀರಾಪುರದಲ್ಲಿ ಹಮ್ಮಿಕೊಂಡಿದ್ದ ಎಮ್ಮಿಗನೂರು ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ ವೇಳೆ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು, ಜಡೇಶ ತಾತ, ತಹಸೀಲ್ದಾರ್ ನರಸಪ್ಪ, ಬಿಇಒ ಸಿದ್ದಲಿಂಗ ಮೂರ್ತಿ, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಇದ್ದರು. 
ಜಿಲ್ಲೆ

ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡಿ

ಪ್ರವೀಣ ಉದುಸಾ ದಲಬಂಜನ್

ಕುರುಗೋಡು: ಕ್ರೀಡೆ ಮಾನಸಿಕ, ದೈಹಿಕವಾಗಿ ಸದೃಢಗೊಳಿಸುವ ಶಕ್ತಿ ಹೊಂದಿದೆ ಎಂದು ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.

ಎಚ್.ವೀರಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಮ್ಮಿಗನೂರು ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ. ಶೈಕ್ಷಣಿಕ ಪ್ರಗತಿಯೊಂದಿಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳನ್ನು ಬಹು ಪ್ರತಿಭವಂತರನ್ನಾಗಿ ಮಾಡಬೇಕು ಎಂದರು.

ವೀರಾಪುರದ ಜಡೇಶ ಶಿವಲಿಂಗ ಮಂದಿರದ ಜಡೇಶ ತಾತ ಮಾತನಾಡಿ, ಪ್ರತಿಭೆ ಹೊರಹಾಕಲು ಕ್ರೀಡಾಕೂಟಗಳು ಸಹಕಾರಿಯಾಗಿವೆ. ಮಕ್ಕಳ ಆಸಕ್ತಿ ಅರಿತು ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂದು ಆಶೀರ್ವಚನ ನೀಡಿದರು.

ಬಿಇಒ ಸಿದ್ದಲಿಂಗಮೂರ್ತಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನ, ಆರೋಗ್ಯ ಸಂವರ್ಧನೆಗೆ ಕ್ರೀಡೆ ಅತ್ಯವಶ್ಯ. ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಮ್ಮಿಗನೂರು, ನೆಲ್ಲೂಡಿ, ಕೊಟ್ಟಾಲ್, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ವೀರಾಪುರ, ಸೋಮಲಾಪುರ, ಚಿಟಿಗಿನಹಾಳ್ ಸೇರಿ 14 ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಸಿಆರ್‌ಪಿ ಸ್ವಯಂಪ್ರಭಾ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಾ ರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತುಕಾರಾಮ್ ಗೊರವ, ಗೌರವ ಅಧ್ಯಕ್ಷ ಸಣ್ಣ ಮಾರೆಣ್ಣ, ಎಇಇ ಕೊಟ್ರಬಸಪ್ಪ, ಮುಖ್ಯಶಿಕ್ಷಕ ಕೊಟ್ರಪ್ಪ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಾರುತಿ ಗೊಂದಿ, ತಾಪಂ ಮಾಜಿ ಉಪಾಧ್ಯಕ್ಷ ಬಸವನ ಗೌಡ, ಗ್ರಾಪಂ ಉಪಾಧ್ಯಕ್ಷೆ ಮಲ್ಲೇಮ್ಮ ದುಗ್ಗಪ್ಪ, ಪ್ರಮುಖರಾದ ನಾಗಲಿಂಗ ಸ್ವಾಮಿ, ಮಂಜುನಾಥ ಸ್ವಾಮಿ ಹಿರೇಮಠ, ಮಾರೆಣ್ಣ ಇತರರಿದ್ದರು.