ಕುರುಗೋಡು ತಾಲೂಕು ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ ಬಾವಿಮನಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಯಿತು. ತಹಸೀಲ್ದಾರ್ ನರಸಪ್ಪ, ತಾಪಂ ಇಒ ನಿರ್ಮಲಾ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ ಇತರರಿದ್ದರು. 
ಜಿಲ್ಲೆ

ಜನರನ್ನು ಕಚೇರಿಗೆ ಅಲೆದಾಡಿಸದಿರಿ

ಕುರುಗೋಡು: ಪಟ್ಟಣದ ತಾಲೂಕು ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ ಬಾವಿಮನಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ಬುಧವಾರ ನಡೆಯಿತು. ಸಭೆಯಲ್ಲಿ ಬೆರಣೆಳಿಕೆ ಜನರು ಭಾಗವಹಿಸಿದ್ದರು.

ಸಾರ್ವಜನಿಕರಿಗಾಗಿ ನಡೆಸಿದ ಸಭೆಯಲ್ಲಿ ಸಾರ್ವಜನಿಕರ ಕೊರತೆಯೇ ಎದ್ದು ಕಾಣಿಸಿತು. ಇದರಿಂದ ಬೇಸರಗೊಂಡ ಎಸ್ಪಿ ಮುಂದಿನ ಸಭೆಯಲ್ಲಿ ಈ ರೀತಿಯ ಲೋಪ ಮರುಕಳಿಸದಂತೆ ನೋಡಿಕೊಳ್ಳಲು ತಹಸೀಲ್ದಾರ್ ನರಸಪ್ಪಗೆ ಸೂಚಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಕಾಲಹರಣ ಮಾಡದೆ ಸಕಾಲಕ್ಕೆ ಜನರ ದೂರುಗಳಿಗೆ ಪರಿಹಾರ ಕಲ್ಪಿಸಬೇಕು. ಜನರೊಂದಿಗೆ ಉತ್ತಮ ಸಂವಹನ ಹೊಂದಬೇಕು. ಕೆಲಸಕ್ಕಾಗಿ ಹಣ ಪಡೆಯುವುದು, ಸುಖಾಸುಮ್ಮನೆ ಕಚೇರಿಗೆ ಅಲೆಸುವುದು ಗಮನಕ್ಕೆ ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆ ಬಳಿಕ ತಾಲೂಕು ಆಡಳಿತ ಕಚೇರಿ ಹಾಗೂ ಸಭಾಂಗಣ ಪರಿಶೀಲಿಸಿದ ಲೋಕಾಯುಕ್ತ ಅಧೀಕ್ಷಕ ಸುರೇಶ್ ಬಾವಿಮನಿ, ರಾಶಿ ರಾಶಿಯಾಗಿ ಬಿದ್ದಿದ್ದ ನೀರಿನ ಬಾಟಲ್‌ಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ತಾಪಂ ಇಒ ನಿರ್ಮಲಾ, ಶಿರಸ್ತೇದಾರ್ ವಿಜಯ್ ಕುಮಾರ್, ಅಧಿಕಾರಿಗಳಾದ ದುರ್ಗಾಪ್ರಸಾದ್, ಸಿಬ್ಬಂದಿ ಇದ್ದರು.