ಕುರುಗೋಡು: ಒಂದೇ ಗುಂಪಿಗೆ ಸೇರಿದ ರಾಸಾಯನಿಕ ಔಷಧವನ್ನು ಬೆಳೆಗೆ ಸಿಂಪಡಿಸಿದರೆ ಬೆಳೆಯಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಸಂಪಡಿ ಹೇಳಿದರು.
ತಾಲೂಕಿನ ಕೋಳೂರು ಹೋಬಳಿಯ ರೈತರ ಮೆಣಸಿನಕಾಯಿ ಬೆಳೆಯ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ರೈತರು ಔಷಧ ಯಾವ ಗುಂಪಿಗೆ ಸೇರಿದೆ ಎಂಬುದನ್ನು ಮೊದಲೇ ಮಾಹಿತಿ ಪಡೆಯಬೇಕು. ಜತೆಗೆ ಕಪ್ಪು ನುಸಿ ಕೀಟಕ್ಕೆ ಜೈವಿಕ ಔಷಧ ಬ್ಯೂವೇರಿಯಾ, ಬಸ್ಸಿಯಾನವೂ ಪರಿಣಾಮಕಾರಿಯಾಗಿದ್ದು ಹೆಚ್ಚಾಗಿ ಬಳಸಲು ಸಲಹೆ ನೀಡಿದರು.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ರಾಸಾಯನಿಕ ಸೋರಿಕೆ!
ಕೋಳೂರು ಹೋಬಳಿ ತೋಟಗಾರಿಕೆ ಇಲಾಖೆ ಎ.ಎಚ್.ಒ. ಕಿರಣ್ ಚೌರಾದ್ ಮಾತನಾಡಿ, ಮೆಣಸಿನಕಾಯಿ ಬೆಳೆಯಲ್ಲಿ ತ್ರೀವವಾಗಿ ಬಾಧಿಸುವ ಬಿಳಿ ಮತ್ತು ಕಪ್ಪು ಥ್ರಿಪ್ಸ್ ಹತೋಟಿಗೆ ವಿವಿಧ ಬಣ್ಣದ ಹಂಟು ಬಲೆ ಸಹಕಾರಿಯಾಗಿದೆ. ಕಳೆದು ನಾಲ್ಕು ವರ್ಷದಿಂದ ಮೆಣಸಿನಕಾಯಿಗೆ ಥ್ರಿಪ್ಸ್ ಉಪಟಳ ಹೆಚ್ಚಾಗಿದ್ದು, ಬೆಳೆಗೆ ವೈರಸ್ ಹಾಗೂ ಮುಟುರು ರೋಗ ಕಾಣಿಸಿಕೊಳ್ಳುತ್ತಿದೆ. ಇದರಿಂದ ರೈತರು ಸಾಕಷ್ಟು ರಾಸಾಯನಿಕ ಔಷಧ ಮೊರೆ ಹೋಗುತ್ತಿದ್ದು, ಆರ್ಥಿಕ ಹೊರೆಯ ಜೊತೆಗೆ ಹಾತೋಟಿ ಕಷ್ಟವಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಜಮೀನಿನ ಸಾಲಿನಲ್ಲಿ ಹಳದಿ, ನೀಲಿ ಮತ್ತು ಬಿಳಿ ಬಣ್ಣದ ಹಂಟು ಬಲೆಯನ್ನು ಹಾಕುವುದರಿಂದ ವಿವಿಧ ರೀತಿಯ ನುಸಿ ಕೀಟ ಬಣ್ಣಕ್ಕೆ ಆಕರ್ಷಿತವಾಗಿ ಬಲೆಗೆ ಬೀಳುತ್ತವೆ. ಇದರಿಂದ ಅವುಗಳ ವಂಶವೃದ್ಧಿ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.