ಜಿಲ್ಲೆ

ಜ.15ಕ್ಕೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ; ಎಸ್‌ಟಿ ಪಟ್ಟಿಗೆ ಕುರುಬ ಸಮಮುದಾಯ ಸೇರಿಸಲು ಒತ್ತಾಯ ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿಕೆ

ತುಮಕೂರು: ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ 340 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ನಗರದ ಬೀರೇಶ್ವರ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಗಿನೆಲೆಯಿಂದ ಜ.15ರಂದು ಆರಂಭಗೊಳ್ಳಲಿರುವ ಪಾದಯಾತ್ರೆ ಫೆ.2ರಂದು ಬೆಂಗಳೂರು ತಲುಪಲಿದ್ದು, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ಪಕ್ಷಾತೀತವಾಗಿ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.

ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕಾಗಿ ರಾಜ್ಯದಲ್ಲಿ ಜನಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳು ಸೇರಿ ಸಮುದಾಯದ ಮುಖಂಡರ ಸಭೆ ನಡೆಸಲಾಗಿದೆ, ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶವನ್ನು ಯಶಸ್ವಿಯಾಗಿ ಸಂಟಿಸಲಾಗಿದ್ದು, ಬೃಹತ್ ಹೋರಾಟ ಹಮ್ಮಿಕೊಳ್ಳುವ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

1976ರಲ್ಲಿ ದೇವರಾಜ ಅರಸು ಅವರು ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಲೋಕಸಭೆಗೆ ಶಿಫಾರಸು ವಾಡಿದ್ದರು, 1994ರಲ್ಲಿ ಸಿದ್ದರಾಮಯ್ಯ ಅವರು ಹಾಲುಮತವನ್ನು ಕುರುಬ ಸಮುದಾಯದೊಂದಿಗೆ ಸೇರಿಸಲು ಶಿಫಾರಸು ವಾಡಿದ್ದರು, ಆದರೆ ರಾಜಕೀಯ ಒತ್ತಡದಿಂದ ವಿಫಲಗೊಂಡಿತು ಎಂದು ತಿಳಿಸಿದರು.

1935ರ ಗೆಜೆಟಿಯರ್‌ನಲ್ಲಿ ಕುರುಬ ಸಮುದಾಯ ಎಸ್ಟಿ ಪಟ್ಟಿಯಲ್ಲಿ ಇದೆ, ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಕುರುಬ, ಜೇನು ಕುರುಬ ಹಾಗೂ ಬೀದರ್ ಭಾಗದಲ್ಲಿ ಗೊಂಡ ಸಮುದಾಯ ಎಸ್ಟಿ ಪಟ್ಟಿಯಲ್ಲಿ ಇದ್ದು, ಉಳಿದ ಕಡೆ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ ಎಂದರು.

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಎಸ್ ಟಿ ಮೀಸಲಾತಿ ಹೋರಾಟದಲ್ಲಿ ಇರುವುದು ಕೇವಲ ಕುರುಬರೇ ಹೊರತು ಯಾವ ಆರ್‌ಎಸ್‌ಎಸ್ ಮುಖಂಡರಾಗಲಿ, ಆರ್‌ಎಸ್‌ಎಸ್ ಹಣವಾಗಲಿ ಅಲ್ಲ ಎಂದರು.

ಆರ್‌ಎಂಸಿ ರಾಜು, ಪಾಲಿಕೆ ಸದಸ್ಯರಾದ ಮಂಜುನಾಥ್, ನರಸಿಂಹರಾಜು, ಹೋರಾಟ ಸಮಿತಿ ಸಂಚಾಲಕ ಮಂಜುನಾಥ್, ಸೋಮಶೇಖರ್, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಮೈಲಾರಪ್ಪ ಸೇರಿ ಇತರರಿದ್ದರು.

ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಸಿದ್ದರಾಮಯ್ಯ: ಎಸ್‌ಟಿ ಮೀಸಲಾತಿ ಹೋರಾಟ ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಪಕ್ಷಾತೀತವಾಗಿ ನಡೆಯುತ್ತಿದ್ದು, ಎಲ್ಲ ಪಕ್ಷದ ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ, ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ, ಅವರು ಅಹಿಂದ ನಾಯಕ, ಹಾಗಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಎಚ್.ಎಂ.ರೇವಣ್ಣ ಹೇಳಿದರು. ಕುರುಬ ಸಮುದಾಯಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವುದಕ್ಕೆ ಮುಖ್ಯಮಂತಿಗೆ ಮನವಿ ಮಾಡಲಾಗಿದೆ, ದೇವರಾಜ ಅರಸು ಅವರು ಸಾಕಷ್ಟು ಚಿಂತಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು, ಸಿದ್ದರಾಮಯ್ಯ ಅವರು 400 ಕೋಟಿ ಅನುದಾನ ನೀಡಿದ್ದರು, ಆದರೆ ಯಡಿಯೂರಪ್ಪ ಎಂಭತ್ತು ಕೋಟಿ ಅನುದಾನ ನೀಡಿದ್ದಾರೆ, ಎಲ್ಲ ಸಮುದಾಯಕ್ಕೂ ನಿಗಮ ಸ್ಥಾಪಿಸುವಾಗ, ನಮ್ಮ ಸಮುದಾಯಕ್ಕೂ ನಿಗಮ ಸ್ಥಾಪಿಸಲು ಒತ್ತಾಯಿಸಲಾಗಿದೆ ಎಂದರು.