ಜಿಲ್ಲೆ

ಕುರುಬ ಸಮಾಜ ಎಸ್ಟಿಗೆ ಸೇರಿಸಿ,  ಹಾಲುಮತ ಮಹಾಸಭಾ ಅಧ್ಯಕ್ಷ ರುದ್ರಣ್ಣ ಮನವಿ

Dharwada - Basavaraj Idli

ಹುಬ್ಬಳ್ಳಿ: ಹಲವು ವರ್ಷಗಳಿಂದ ಶೋಷಿತ ವರ್ಗದಲ್ಲಿರುವ ಕುರುಬರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಂವಿಧಾನಬದ್ಧ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಹಾಲುಮತ ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನಗಳು ಆಗಿ ಅವುಗಳ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕುರುಬರು ಮೂಲದಿಂದಲೇ ಬುಡಕಟ್ಟು ಸಮುದಾಯದವರು. ಇದೇ ಜಾತಿಯ ಸಮಾನಾರ್ಥಕ ಪದಗಳನ್ನು ದಕ್ಷಿಣ ಭಾರತದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಕರ್ನಾಟಕದಲ್ಲೂ ಎಸ್ಟಿಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಾಲುಮತ ಮಹಾಸಭಾ ಇದು ಕುರುಬರ ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ. ಆದರೆ, ಕೆಲವರು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವುದಕ್ಕೆ ವಿರೋಧ ಮಾಡುತ್ತ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಇದರಿಂದ ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಯಾವುದೇ ಸಮಾಜದ ಹಕ್ಕು ನಾವು ಕಿತ್ತುಕೊಳ್ಳುತ್ತಿಲ್ಲ. ಬದಲಾಗಿ ಮೀಸಲಾತಿಯನ್ನು ಹೆಚ್ಚಿಸುವುದರ ಜತೆಗೆ ತಮ್ಮನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ಈ ಬೇಡಿಕೆಗೆ ಹಲವು ಸ್ವಾಮೀಜಿಗಳು, ರಾಜಕೀಯ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂದರು.

ಕುರುಬ ಸಮುದಾಯ ಎಸ್ಟಿಗೆ ಸೇರಿಸುವುದರ ವಿರುದ್ಧ ಮಾತನಾಡುವುದು ಸಾಧುವಲ್ಲ. ಹಿಂದುಳಿದಿರುವ ಒಂದು ಸಮಾಜದ ಬೇಡಿಕೆಗೆ ಇತರ ಸಮಾಜದವರು ಧ್ವನಿಗೂಡಿಸಬೇಕು. ಆ ಮೂಲಕ ಸಾಂವಿಧಾನಿಕ ಹಕ್ಕಿಗೆ ಬೆಂಬಲ ನೀಡಬೇಕು ಎಂದು ಕೋರಿದರು.

ಮಹಾಸಭಾ ಮುಖಂಡರಾದ ಸೋಮಣ್ಣ ಮೌರ್ಯ, ಪ್ರೇಮಾ ನಾಯ್ಕರ್, ಮುತ್ತು ಜಡಿ, ಮಹಾಂತೇಶ ಕಟ್ಟೆಕಾರ ಗೋಷ್ಠಿಯಲ್ಲಿದ್ದರು.