ವಿಜಯವಾಣಿ ಸುದ್ದಿಜಾಲ ಗುರುಪುರ
ಸರ್ಕಾರಿ ಸೌಲಭ್ಯಗಳು ಕಡಿಮೆ ಇದ್ದಾಗ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇತ್ತು. ಈಗ ಎಲ್ಲ ಸೌಲಭ್ಯವಿದ್ದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ. ಬದಲಾದ ಸರ್ಕಾರದ ಧೋರಣೆಗಳು ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಮೇಲಿನ ವ್ಯಾಮೋಹ ಈ ದುಃಸ್ಥಿತಿಗೆ ಕಾರಣ. ಕನ್ನಡ ಕಲಿಕೆಗೆ ಆದ್ಯತೆ ಹಾಗೂ ಮಾತೃ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಇರುತ್ತಿದ್ದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರಲಿಲ್ಲ ಎಂದು ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಅಣ್ಣಯ್ಯ ಎಂ. ಹೇಳಿದರು.
ಕುಪ್ಪೆಪದವು ಕಿಲೆಂಜಾರುವಿನ ದ.ಕ. ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕುಪ್ಪೆಪದವು ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ, ಶಿಕ್ಷಣ ವ್ಯಾಪಾರವಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಡೋಲಾಯಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಅಸುಂಪ್ತಾ ಮೇರಿ ಸಿಕ್ವೇರ, ಶಿಕ್ಷಕಿಯರಾದ ಮಧುಮಾಲತಿ, ರಾಧಮ್ಮ ಮತ್ತು ಸಹ ಶಿಕ್ಷಕಿ ಲಕ್ಷ್ಮೀ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕುಪ್ಪೆಪದವು ಪಂಚಾಯಿತಿ ಅಧ್ಯಕ್ಷೆ ವಿಮಲಾ ಜಿ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ರಫೀಕ್ ಆಚಾರಿಜೋರ, ಪುಷ್ಪಾ ನಾಯ್ಕ, ಶಿಕ್ಷಣ ಇಲಾಖಾಧಿಕಾರಿ ವಿಶ್ವನಾಥ, ಕಣ್ಣೋರಿ ಕ್ಲಸ್ಟರ್ ಸಿಆರ್‌ಪಿ ಪುಷ್ಪಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಅಂಬೆಲೊಟ್ಟು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಮ್ತಿಯಾಜ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುನೀರ್ ಪ್ರಸ್ತಾವನೆಗೈದರು. ಶಿಕ್ಷಕಿ ವಿಲ್ಮಾ ಜೆನಿತಾ ಡಿ’ಮೆಲ್ಲೊ ಸ್ವಾಗತಿಸಿದರು. ಸಹ ಶಿಕ್ಷಕಿ ಲಕ್ಷ್ಮೀ ನಿರೂಪಿಸಿದರು. ಶಿಕ್ಷಕಿ ರಂಜಿತಾ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.