ಜಿಲ್ಲೆ

ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯಲು ಕುಪ್ಮಾ ಆಗ್ರಹ

Mangaluru - Hariprasad Rai



ಮಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊರಡಿಸಿರುವ ಪ್ರಾಯೋಗಿಕ ಪರೀಕ್ಷೆ
ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ನಿಯೋಜಿಸುವ ಬಗ್ಗೆ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಪ.ಪೂ. ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಪ್ಮಾ) ಆಗ್ರಹಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾದೃಚ್ಛೀಕರಿಸುವ (ಇತರ ಕಾಲೇಜುಗಳಲ್ಲಿ ಪರೀಕ್ಷೆಗೆ ನಿಯೋಜನೆ ) ಬಗ್ಗೆ ಎಲ್ಲ ಪ.ಪೂ. ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಅವೈಜ್ಞಾನಿಕವಾಗಿದ್ದು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿಯ ನಿರ್ಣಯಗಳನ್ನು ಇಲಾಖೆ ಜಾರಿಗೊಳಿಸಿದರೆ ಅದು ವಿದ್ಯಾರ್ಥಿಗಳ ಹಿತದೃಷ್ಟಿಗೆ ವಿರುದ್ಧವಾಗಿರುತ್ತದೆ ಎಂದು ಕುಪ್ಮಾ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕ ಪರೀಕ್ಷೆಯು ಆಯಾ ಕಾಲೇಜುಗಳ ಉಸ್ತುವಾರಿಯಲ್ಲಿ ಬಾಹ್ಯ ಪರೀಕ್ಷಾ ವೀಕ್ಷಕರು ಸುಸೂತ್ರವಾಗಿ ನಡೆಸಿದ್ದರು. ಈಗ ಶೈಕ್ಷಣಿಕ ವರ್ಷದ ನಡುವೆ ಯಾವುದೇ ರೀತಿಯ ಚರ್ಚೆ ನಡೆಸದೆ ದ್ವಿತೀಯ ಪಿಯುಸಿ
ಪ್ರಾಯೋಗಿಕ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆಯಾ ಕಾಲೇಜುಗಳಲ್ಲಿ ಬರೆಯದೆ ಇತರ ಪರೀಕ್ಷಾ ಕೇಂದ್ರಗಳ ಕಾಲೇಜುಗಳಿಗೆ ಹೋಗಿ ಅಲ್ಲಿ ಪರೀಕ್ಷೆ ಬರೆಯುವಂತೆ ಸುತ್ತೋಲೆಯನ್ನು ಹೊರಡಿಸುವ ಮೂಲಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಶಿಕ್ಷಣ ಸಂಸ್ಥೆಗಳಿಗೆ ಆಘಾತ ನೀಡಿದೆ. ಪ್ರಾಯೋಗಿಕ ಪರೀಕ್ಷೆಗಳು ನಡೆಯುವಾಗ ವಿದ್ಯಾರ್ಥಿಗಳ ಹೆಸರು ಅಕ್ಷರಮಾಲೆ ಪ್ರಕಾರ ಆಯ್ಕೆಯಾಗುತ್ತದೆ .ಆಗ ಬೇರೆ ಬೇರೆ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ದಿನಾಂಕಗಳು ಬೇರೆ ಬೇರೆಯೇ ಇರುತ್ತದೆ. ಈ ಸಂದರ್ಭ ಇತರ ವಿದ್ಯಾರ್ಥಿಗಳು ಏನು ಮಾಡುವುದು ? ತರಗತಿಗಳನ್ನು ಹೇಗೆ ನಡೆಸುವುದು ಎಂಬ ಪ್ರಶ್ನೆ ಕಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಜೆಇಇ ಮೈನ್ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಆಗ ಪ್ರಾಯೋಗಿಕ ಪರೀಕ್ಷೆಗಳು ಬೇರೆ ಕಾಲೇಜುಗಳಲ್ಲಿ ನಡೆದರೆ ಈ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಹೋಗಿ ಬರುವ ಸಮಯ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಂಡಿದ್ದು ಪ್ರಾಯೋಗಿಕ ಪರೀಕ್ಷೆಗೆ ಇತರ ಕಾಲೇಜುಗಳಿಗೆ ಹೋಗಬೇಕೆಂದಾಗ ಅವರಿಗೆ ಮಾನಸಿಕ
ತಳಮಳ ಮತ್ತು ಅವರು ಹೋಗುವ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸುವಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದು ಹಾಗೂ ಪ್ರಯೋಗಾಲಕ್ಕೆ ಬೇಕಾಗುವ ಉಪಕರಣಗಳ ಕೊರತೆ, ಪ್ರಯಾಣದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಈ ಪರೀಕ್ಷೆಯನ್ನು ಏಕ ಕಾಲದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೇ ಹೊರಡಿಸಿರುವ ಈ ಸುತ್ತೋಲೆಯನ್ನು ತಕ್ಷಣವೇ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳ ಹಾಗೂ ಪೋಷಕರ ಪರವಾಗಿ ಆಗ್ರಹಿಸುತ್ತದೆ ಎಂದು ಡಾ.ಎಂ. ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.