ಜಿಲ್ಲೆ

ಶತಮಾನ ಕಂಡ ಶಾಲೆ ಅವನತಿ : ಸೋರುವ ಛಾವಣಿ, ಮೂಲಸೌಕರ್ಯ ಕೊರತೆ : ಒಳಗೆ ಬರಲು ದಾರಿಯೇ ಇಲ್ಲ

ಸೌಮ್ಯ ಆರ್

ಮಂಜೇಶ್ವರ: ಶತಮಾನೋತ್ಸವವನ್ನು ಪೂರೈಸಿ ನಾಡಿನ ಸಹಸ್ರಾರು ಮಂದಿಗೆ ವಿದ್ಯಾದಾನ ಮಾಡಿದ ಕುಂಜತ್ತೂರು ಎಲ್ಪಿ ಶಾಲೆ ಇಂದು ಅವ್ಯವಸ್ಥೆಗಳ ಆಗರವಾಗಿ ಮಾರ್ಪಾಡಾಗಿದೆ. ನೂರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಈ ಸಂಸ್ಥೆ ಇದೀಗ ಶಿಥಿಲಾವಸ್ಥೆಗೆ ತಲುಪಿರುವುದಾಗಿ ಸ್ಥಳೀಯರು ಅವಲತ್ತುಕೊಂಡಿದ್ದಾರೆ.

ಈ ಶಾಲೆ ಸ್ಥಾಪನೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ್ದು, ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಗಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಸೌಲಭ್ಯಗಳ ಕೊರತೆ, ನಿರ್ವಹಣಾ ಸಮಸ್ಯೆ ಮತ್ತು ಹಲವು ರೀತಿಯ ಅವ್ಯವಸ್ಥೆಗಳಿಂದಾಗಿ ಶಾಲೆ ಅವನತಿಯತ್ತ ಸಾಗಿದೆ.

ಶಾಲೆ ಕಟ್ಟಡ ಸೋರುತಿದ್ದು ಮಕ್ಕಳು ಈಜುಕೊಳದಲ್ಲಿ ಕಲಿಯಬೇಕಾದ ಪರಿಸ್ಥಿತಿ ಎದುರಾಗಿರುವುದಾಗಿ ವಾರ್ಡ್ ಸದಸ್ಯ ಮಾಹಿತಿ ನೀಡಿದ್ದಾರೆ. ಇಲ್ಲಿ 105 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿರುವುದಾಗಿ ಮುಖ್ಯಶಿಕ್ಷಕ ರಾಧಾಕೃಷ್ಣ ತಿಳಿಸಿದ್ದಾರೆ.

ಅಂಗವಿಕಲ ಮಕ್ಕಳು ಶಾಲೆಗೆ ಬರಲು, ಏನಾದರೂ ಅವಘಡ ಸಂಭವಿಸಿದರೆ ಶಾಲಾ ಆವರಣಕ್ಕೆ ಆಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನ ಅಥವಾ ಇನ್ಯಾವುದೋ ವಾಹನಗಳು ಬರುವ ದಾರಿಯನ್ನು ಮುಚ್ಚಿರುವುದಾಗಿ ವಾರ್ಡ್ ಸದಸ್ಯ ಆರೋಪಿಸಿದ್ದಾರೆ. ಮಕ್ಕಳ ಪ್ರತಿಭೆಯನ್ನು ಬಾಹ್ಯ ಜಗತ್ತು ಗುರುತಿಸಲು ಆಟದ ಮೈದಾನ ಇಲ್ಲದೇ ಇರುವುದು ವಿದ್ಯಾರ್ಥಿ ಹಾಗೂ ಪಾಲಕರನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ.

ಹಾವುಗಳ ಹಾವಳಿ

ಶಾಲೆ ಆವರಣ ಗೋಡೆ ಕುಸಿದು ಬಿದ್ದಿದೆ. ಈ ಪರಿಸರದಲ್ಲಿ ವಿಷಪೂರಿತ ಹಾವುಗಳು ಕಂಡು ಬರುತ್ತಿರುವುದಾಗಿ ಪರಿಸರವಾಸಿಗಳು ಹೇಳುತ್ತಿದ್ದಾರೆ. ಸಹಸ್ರಾರು ಮಕ್ಕಳ ಭವಿಷ್ಯ ರೂಪಿಸಿದ ಈ ಶಾಲೆಯಲ್ಲಿ ಸಮಸ್ಯೆ ಸರಿಯಾಗಿ ಪರಿಹಾರವಾಗದಿರುವುದರಿಂದ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಕ್ಷಣ ಗಮನಹರಿಸಬೇಕಾಗಿರುವುದು ಅನಿವಾರ್ಯ. ಅವ್ಯವಸ್ಥೆಗಳನ್ನು ಸರಿಪಡಿಸಲು ಮತ್ತು ಶೈಕ್ಷಣಿಕ ಮಟ್ಟವನ್ನು ಪುನಃ ಶ್ರೇಯಸ್ಕರಗೊಳಿಸಲು ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ. ಈ ಶತಮಾನೋತ್ಸವ ಶೈಕ್ಷಣಿಕ ಸಂಸ್ಥೆಯು ಮತ್ತೆ ಸ್ತುತ್ಯರ್ಥ ಸಾಧನೆ ಮಾಡಬೇಕೆಂಬುದು ನಾಡಿನ ವಿದ್ಯಾಭಿಮಾನಿಗಳ ಆಶಯ.