ಕುಂದಾಪುರ: ಭಜನಾ ಸಂಸ್ಕೃತಿ ಎಲ್ಲೆಡೆ ಬೆಳೆಯುತ್ತಿರುವುದು ಸಮಾಧಾನಕರ ಸಂಗತಿ. ದೇವರ ನಾಮ ಸಂಕೀರ್ತನೆಗಳಿಂದ ಏಕಾಗ್ರತೆ ಸಾಧಿಸಬಹುದು. ಯಾರು ಬೇಕಾದರೂ ಒಳ್ಳೆಯ ನಡೆಗಳಿಂದ ದೇವರಾಗಬಹುದು ಎಂದು ರಾಷ್ಟ್ರೀಯ ಸೇವಾ ಸಂಘ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕೋಟೇಶ್ವರದಲ್ಲಿ ಶ್ರೀರಾಮ ಕೋಟೀಶ್ವರ ಕಲಾ ಸಂಘ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಯುವ ಎರಡು ದಿನಗಳ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಣಿತ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಭಾರತ ಧರ್ಮದ ಕೇಂದ್ರ ಬಿಂದು. ದೇವರು ಸಾಕ್ಷಾತ್ ಬಂದು ನಡೆದಾಡಿದ, ನಮ್ಮನ್ನು ತಿದ್ದಿ ತೀಡಿದ ವಿಶ್ವದ ಏಕೈಕ ದೇಶ ಭಾರತ. ಇತರೆಡೆ ದೇವದೂತರು ಎಂದು ಕರೆಸಿಕೊಳ್ಳುವವರಿದ್ದರು ಎಂದರು.
ಶ್ರೀರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಬಿ.ಜಿ. ಸೀತಾರಾಮ ಧನ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಎಚ್. ರಾಮಚಂದ್ರ ವರ್ಣ, ಉಪಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಎಚ್. ಸುವರ್ಣ, ಪ್ರಧಾನ ಸಂಚಾಲಕ ರಮೇಶ್ ಪುತ್ರನ್ ಉಪಸ್ಥಿತರಿದ್ದರು. ಸುಮಶ್ರೀ ಧನ್ಯ ಪ್ರಾರ್ಥಿಸಿದರು. ಕಲಾಸಂಘದ ಗೌರವ ಸಲಹೆಗಾರ ಎಂ. ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಕೆ.ಜಿ. ವೈದ್ಯ ನಿರೂಪಿಸಿ, ವಂದಿಸಿದರು.
ಸ್ಪರ್ಧಾ ಫಲಿತಾಂಶ
ಹಳೇ ಅಳಿವೆ ಶ್ರೀರಾಮ ಭಜನಾ ಮಂಡಳಿಯ ಮಹಿಳೆಯರು ಕುಣಿತ ಭಜನೆ ಮತ್ತು ಬಂಡಿಮಠ ನಾಗರಾಜ ಅಡಿಗ ಭಕ್ತಿ ಗೀತೆ, ಮಹಿಳಾ ಕುಣಿತ ಭಜನಾ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಮಂಗಳೂರು ಹೊಸಬೆಟ್ಟು ಬಾಲವಿಕಾಸ ಭಜನಾ ಮಂಡಳಿ ಪ್ರಥಮ, ಉಡುಪಿ ಮುಳ್ಳುಗುಡ್ಡೆಯ ಬನಶಂಕರಿ ಮಹಿಳಾ ಭಜನಾ ಮಂಡಳಿ ದ್ವಿತೀಯ, ಕಾರ್ಕಳ ಕಡ್ತಲದ ದುರ್ಗಾಪರಮೇಶ್ವರಿ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದುಕೊಂಡರು. ಬಿ.ಜಿ. ಸೀತಾರಾಮ ಧನ್ಯ, ಪಿ. ಗಣಪಯ್ಯ ಚಡಗ, ರವೀಂದ್ರ ಐತಾಳ್ ಮತ್ತು ಭಾಗ್ಯಲಕ್ಷ್ಮೀ ತೀರ್ಪುಗಾರರಾಗಿ ಸಹಕರಿಸಿದರು.
ರಾಮ, ಕೃಷ್ಣರೆಲ್ಲ ದೇವರಾಗಿಯೇ ಹುಟ್ಟಿದ್ದಲ್ಲ. ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು. ಯಾರು ಬೇಕಾದರೂ ಒಳ್ಳೆಯ ನಡೆಗಳಿಂದ ದೇವರಾಗಬಹುದು. ಇಂದು ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳೇ ಎಲ್ಲೆಡೆ ವ್ಯವಸ್ಥಿತವಾಗಿ ನಡೆಯುತ್ತಿವೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ