ವಿಜಯವಾಣಿ ಸುದ್ದಿಜಾಲ ಉಡುಪಿ
ಕೃಷ್ಣ ನಗರಿ ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದಿಂದ ನಡೆಯುತ್ತಿರುವ ಸಪ್ತೋತ್ಸವ ಕಾರ್ಯಕ್ರಮಕ್ಕೆ ಕುಣಿತ ಭಜನೆ ಇನ್ನಷ್ಟು ಮೆರಗು ನೀಡಿತು.
ಭಾನುವಾರ ಸಂಜೆ 6 ಗಂಟೆಗೆ ರಥಬೀದಿಯ ಸುತ್ತ 25 ತಂಡಗಳು ಕುಣಿತ ಭಜನಾ ಸೇವೆ ಸಲ್ಲಿಸಿದ್ದು, ಸಾವಿರಾರು ಜನರು ವೀಸಿದರು. ಕುಣಿತ ಭಜನೆ ನಿಮಿತ್ತ ದೇಗುಲದ ಸುತ್ತ ಚಿತ್ತಾಕರ್ಷಕ ಹಾಗೂ ಬೃಹದಾಕಾರದ 25 ರಂಗೋಲಿ ಬಿಡಿಸುವ ಸ್ಪರ್ಧೆ ಆಯೋಜಿಸಿದ್ದು, ರಚಿಸಿದ್ದ ರಂಗೋಲಿಗಳು ಸೆಳೆದವು. ಬಳಿಕ ಒಂದೊಂದು ರಂಗೋಲಿಗಳ ಸುತ್ತ ಭಜನಾ ತಂಡಗಳು ಕುಣಿತದ ಮೂಲಕ ದೇವರಿಗೆ ಭಜನಾ ಸೇವೆ ಸಮರ್ಪಿಸಿದರು.
ಕುಣಿತ ಭಜನೆಗಾಗಿ ರಚಿಸಿದ್ದ ರಂಗೋಲಿಗಳ ಮಧ್ಯೆ ಹಣತೆಗಳನ್ನಿಟ್ಟು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಮಠದ ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ದೀಪ ಬೆಳಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತುಳುನಾಡಿನ ಖ್ಯಾತ ಹಾಸ್ಯನಟ ಅರವಿಂದ್ ಬೋಳಾರ್, ಈಶ್ವರ ಚಿತ್ಪಾಡಿ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಇತರರು ಪಾಲ್ಗೊಂಡಿದ್ದರು.
ಕನಕ ಗೋಪುರದ ಬಳಿ ಭಜನಾ ಕುಣಿತಕ್ಕೆ ಚಾಲನೆ ನೀಡಿದ ಪರ್ಯಾಯ ಸುಗುಣೇಂದ್ರ ಶ್ರೀಗಳು ಮಾತನಾಡಿ, ಎಲ್ಲರೂ ಸೇರಿ ಕುಣಿತ ಭಜನೆಯಲ್ಲಿ ಭಾಗವಹಿಸುವ ಮೂಲಕ ಸೇವೆ ಮಾಡಿದ್ದರಿಂದ ಇಲ್ಲಿರುವ ಎಲ್ಲ ದೇವರಿಗೆ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣರಿಗೆ ವಿಶೇಷ ಆನಂದ ಲಭಿಸಿದೆ. ದೇವರಿಗೆ ಸಲ್ಲಿಸುವ ಅನೇಕ ಸೇವೆಗಳಲ್ಲಿ ಭಜನೆಯೂ ಪ್ರಮುಖವಾಗಿದೆ. ಕುಣಿತ ಭಜನೆಯೂ ಸಹ ಹಳೆಯ ಸಂಪ್ರದಾಯವಾಗಿದ್ದು, ಅದು ಅವನತಿಯತ್ತ ಸಾಗಿತ್ತು. ಆ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು, ಮತ್ತೆ ಕುಣಿತ ಭಜನೆ ಚಾಲನೆಗೊಳ್ಳುವಂತಾಗಲು ನಮ್ಮ ಪರ್ಯಾಯದ ಸಪ್ತೋತ್ಸವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.