ಜಿಲ್ಲೆ

ಕುಣಿಗಲ್ ಪುರಸಭೆ ಕೈ ವಶ ; ಎಸ್.ಕೆ.ನಾಗೆಂದ್ರ ಅಧ್ಯಕ್ಷ , ಮಂಜುಳಾ ರಂಗಪ್ಪ ಉಪಾಧ್ಯಕ್ಷೆ

ಕುಣಿಗಲ್ : ಸ್ವಪಕ್ಷೀಯ ಸದಸ್ಯರ ನಡುವಿನ ತೀವ್ರ ಪೈಪೋಟಿಯಿಂದಾಗಿ ಕುತೂಹಲ ಕೆರಳಿಸಿದ್ದ ಕುಣಿಗಲ್ ಪುರಸಭೆಗೆ ಅವಿರೋಧವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಿದೆ. ಸೋಮವಾರ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಸ್.ಕೆ.ನಾಗೆಂದ್ರ ಹಾಗೂ ಉಪಾಧ್ಯಕ್ಷೆಯಾಗಿ ಮಂಜುಳಾ ರಂಗಪ್ಪ ಆಯ್ಕೆಯಾಗಿದ್ದಾರೆ.

ಒಟ್ಟು 23 ಸದಸ್ಯ ಬಲದಲ್ಲಿ ಕಾಂಗ್ರೆಸ್ 14, ಬಿಜೆಪಿ 4, ಜೆಡಿಎಸ್ 3 ಹಾಗೂ ಇಬ್ಬರು ಪಕ್ಷೇತರರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಎಸ್.ಕೆ.ನಾಗೆಂದ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ರಂಗಪ್ಪ ನಾಮಪತ್ರ ಸಲ್ಲಿಸಿದರು. ಇತ್ತ ಬಿಜೆಪಿಯಿಂದ ಕೋಟೆ ನಾಗಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಕೊನೆಗೆ ಕೋಟೆ ನಾಗಣ್ಣ ಉಮೇದುವಾರಿಕೆ ಹಿಂಪಡೆದಿದ್ದರಿಂದ ಅಧ್ಯಕ್ಷರಾಗಿ ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷೆಯಾಗಿ ಮಂಜುಳಾ ರಂಗಪ್ಪ ಚುಕ್ಕಾಣಿ ಹಿಡಿದಿದ್ದಾರೆ.

ನಾಯಕರ ನಿರ್ಧಾರಕ್ಕೆ ಮುಖಂಡರ ವಿರೋಧ : ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದವರ ಪೈಕಿ 4ನೇ ಬಾರಿ ಸದಸ್ಯನಾಗಿರುವ ರಂಗಸ್ವಾಮಿ, 3ನೇ ಬಾರಿ ಸದಸ್ಯರಾಗಿರುವ ರಾಮು, ಸಮಿವುಲ್ಲಾ ಹಾಗೂ 2ನೇ ಬಾರಿ ಸದಸ್ಯರಾಗಿರುವ ಅರುಣ್ ಕುಮಾರ್ ಅವರನ್ನು ಬಿಟ್ಟು ಇದೇ ಮೊದಲ ಬಾರಿಗೆ ಪುರಸಭೆಗೆ ಪ್ರವೇಶಿರುವ ಎಸ್.ಕೆ.ನಾಗೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ನಾಯಕರ ನಿರ್ಧಾರಕ್ಕೆ ಕೈ ಮುಖಂಡರಲ್ಲಿ ಅಸಮಾಧಾನದ ಜತೆಗೆ ಆಕ್ರೋಶಕ್ಕೆ ಕಾರಣವಾಗಿದೆ. ರಂಗಸ್ವಾಮಿ ಅಧ್ಯಕ್ಷರಾಗಬೇಕೆಂದು ಜನಾಭಿಪ್ರಾಯ ಹೆಚ್ಚಾಗಿರುವ ಜತೆಗೆ 30 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ್ದು, ಅವರನ್ನು ಕಡೆಗಣಿಸಿರುವುದು ಸಹಜವಾಗಿಯೇ ಅವರ ಬೆಂಬಲಿಗರ ಬೇಸರಕ್ಕೆ ಕಾರಣವಾಗಿದೆ.

ಶಾಸಕರಿಗೆ ಧಿಕ್ಕಾರ: ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೆರವಣಿಗೆ ವೇಳೆ ಶಾಸಕರ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಧಿಕ್ಕಾರ ಕೂಗಿದ ಪ್ರಸಂಗ ನಡೆಯಿತು. ನೀವು ಶಾಸಕರಾಗಲು ಸಮುದಾಯದ ಮತಗಳು ಕಾರಣ, ಆದರೆ ಪುರಸಭೆಯಲ್ಲಿ 7 ಮಂದಿ ಅಲ್ಪಸಂಖ್ಯಾತ ಸದಸ್ಯರಿದ್ದು ಅವರಿಗೆ ಉಪಾಧ್ಯಕ್ಷ ಸ್ಥಾನವನ್ನೂ ನೀಡದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡನ್ನು ಒಂದೇ ಸಮುದಾಯಕ್ಕೆ ನೀಡುವ ಮೂಲಕ ಅನ್ಯಾಯ ಮಾಡಿದ್ದೀರಿ ಎಂದು ಹರಿಹಾಯ್ದ ಘಟನೆಯೂ ನಡೆಯಿತು.

ಆಯ್ಕೆಯ ಮಾನದಂಡ ? : ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ 14 ಸದಸ್ಯರ ಸಭೆ ನಡೆಸಿದ ಸಂಸದ ಡಿ.ಕೆ.ಸುರೇಶ್, ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ, ಈ ವೇಳೆ ಬಹುತೇಕ ಸದಸ್ಯರು ಎಸ್.ಕೆ.ನಾಗೇಂದ್ರ ಅವರ ಪರ ಬ್ಯಾಟಿಂಗ್ ಮಾಡಿದ್ದು, ಯಾವುದೇ ಕಾರಣಕ್ಕೂ ರಂಗಸ್ವಾಮಿ ಅವರನ್ನು ಮಾತ್ರ ಅಧ್ಯಕ್ಷರನ್ನಾಗಿ ಮಾಡಬೇಡಿ ಎಂದಿದ್ದಾರೆ ಎನ್ನಲಾಗಿದೆ, ಅದರಂತೆ ಸಂಸದ ಸುರೇಶ್, ನಾಗೆಂದ್ರ ಅವರನ್ನು ಅಧ್ಯಕ್ಷರನ್ನಾಗಿಸಲು ಸಮ್ಮತಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡುವರೆ ವರ್ಷದ ಮೊದಲ ಅವಧಿಯ 9 ತಿಂಗಳು ನಾಗೇಂದ್ರ ಅಧ್ಯಕ್ಷ ನಂತರ ಉಳಿದ ಆಕಾಂಕ್ಷಿತರಿಗೆ ಅವಕಾಶ ನೀಡಲು ಅವಧಿ ಹಂಚಿಕ ಮಾಡಲಾಗಿದೆ ಎನ್ನಲಾಗಿದೆ. ಸದಸ್ಯರ ಅಭಿಪ್ರಾಯವೇ ಆಯ್ಕೆಯ ಮಾನದಂಡವಾಗಿದೆ, ಆದರೆ ಸದಸ್ಯರ ಅಭಿಪ್ರಾಯದ ವಿಚಾರದಲ್ಲಿ ಆಮಿಷದ ವಾಸನೆ ಪಟ್ಟಣದಲ್ಲಿ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಂಸದ ಡಿ.ಕೆ.ಸುರೇಶ್, ಕುಣಿಗಲ್ ಶಾಸಕ ಹಾಗೂ ಎಲ್ಲ ಪುರಸಭೆ ಸದಸ್ಯರ ಆಶೀರ್ವಾದದಿಂದ ಪುರಸಭೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ, ಪಟ್ಟಣದ ಅಭಿವೃದ್ಧಿಗೆ ಎಲ್ಲರ ಮಾರ್ಗದರ್ಶನದಲ್ಲಿ ಶ್ರಮಿಸುತ್ತೇನೆ. ಎಸ್.ಕೆ.ನಾಗೆಂದ್ರ, ಅಧ್ಯಕ್ಷ ಪುರಸಭೆ ಸಂಸದ ಡಿ.ಕೆ.ಸುರೇಶ್ ಹಾಗೂ ಕುಣಿಗಲ್ ಶಾಸಕರ ಆಶೀರ್ವಾದದಿಂದ ಉಪಾಧ್ಯಕ್ಷೆಯಾಗಿದ್ದೇನೆ. ಪಟ್ಟಣದ ಅಭಿವೃದ್ಧಿಗೆ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಶ್ರಮಿಸುವೆ. ಮಂಜುಳಾ ರಂಗಪ್ಪ, ಉಪಾಧ್ಯಕ್ಷೆ

ಪಾವಗಡ ಪುರಸಭೆಯಲ್ಲಿ ಕೈ ಆಡಳಿತ

ಪಾವಗಡ: ಇಲ್ಲಿನ ಪುರಸಭೆ ಆಡಳಿತದ ಚುಕ್ಕಾಣಿ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಿದೆ, ಸೋಮವಾರ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ 2ನೇ ಬಾರಿಗೆ ಅಧ್ಯಕ್ಷರಾಗಿ 23ನೇ ವಾರ್ಡ್‌ನ ರಾಮಾಂಜಿನಪ್ಪ ಹಾಗೂ ಉಪಾಧ್ಯಕ್ಷೆಯಾಗಿ 15ನೇ ವಾರ್ಡ್‌ನ ಸುಧಾಲಕ್ಷ್ಮೀ ಪ್ರಮೋದ್‌ಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು, ಒಟ್ಟು 23 ಸದಸ್ಯ ಸ್ಥಾನಗಳಲ್ಲಿ ಕಾಂಗ್ರೆಸ್ 20, ಜೆಡಿಎಸ್ 2 ಹಾಗೂ ಒಬ್ಬ ಪಕ್ಷೇತರರಿದ್ದು ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್ ನಿರಾಯಾಸವಾಗಿ ಗಾದಿ ಏರಿದೆ, ಸದಸ್ಯರಾಗಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಹಾಗೂ ಈಗಾಗಲೇ ಒಂದು ಬಾರಿ ಅಧ್ಯಕ್ಷರಾಗಿದ್ದ ರಾಮಾಂಜಿನಪ್ಪ ಅವರಿಗೆ ಕಾಂಗ್ರೆಸ್ ಮಣೆಹಾಕಿದೆ.

ಶಾಸಕ ವೆಂಕಟರವಣಪ್ಪ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು, ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಕೆ.ಆರ್.ನಾಗರಾಜು ಕರ್ತವ್ಯ ನಿರ್ವಹಿಸಿದರು. ಜಿಪಂ ಸದಸ್ಯ ಎಚ್.ವಿ.ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಜಿ.ನವೀನ್‌ಚಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ತಾಳೇಮರದಹಳ್ಳಿ ನರಸಿಂಹಯ್ಯ, ಮುಖಂಡ ಎ.ಶಂಕರರೆಡ್ಡಿ ಹಾಗೂ ಪುರಸಭೆ ಸದಸ್ಯರಿದ್ದರು.

ಪಕ್ಷದ ನಾಯಕರ ಸಲಹೆಯಂತೆ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನಾಗುವ ಅವಕಾಶ ಕಲ್ಪಿಸಿದ್ದಾರೆ. ಪಟ್ಟಣದ ಅಭಿವೃದ್ಧಿ, ಮೂಲ ಸೌಲಭ್ಯ ಒದಗಿಸುವ ಜೊತೆಗೆ ಉತ್ತಮ ಕಾರ್ಯನಿರ್ವಹಣೆ ಮಾಡುವ ವಿಚಾರದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಮಾಂಜಿನಪ್ಪ. ನೂತನ ಅಧ್ಯಕ್ಷ