ಜಿಲ್ಲೆ

ಅಪರಾಧ ತಡೆಗೆ ಜನರ ಸಹಕಾರ ಅಗತ್ಯ ; ಕುಣಿಗಲ್‌ನಲ್ಲಿ 112 ತುರ್ತು ಕರೆ ಸೇವೆ ಜನ ಜಾಗೃತಿ

Tumakuru

ಕುಣಿಗಲ್ : ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ 112 ಸಹಾಯವಾಣಿ ಪ್ರಾರಂಭಿಸಲಾಗಿದೆ, ನಾಗರಿಕರು ಸದ್ಬಳಕ್ಕೆ ಮಾಡಿಕೊಂಡು ಅಪರಾಧ ಸಂಖ್ಯೆ ಕಡಿಮೆ ಮಾಡಲು ಸಹಕರಿಸಬೇಕೆಂದು ಡಿವೈಎಸ್‌ಪಿ ಜಿ.ಆರ್.ರಮೇಶ್ ತಿಳಿಸಿದರು.

ಪಟ್ಟಣದ ಎನ್.ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮಾಸ್ಕ್ ಬಳಕೆ ಹಾಗೂ ಆಟೋಗಳಿಗೆ 112 ತುರ್ತು ಕರೆ ಸೇವೆ ಜಾಗೃತಿ ಕರಪತ್ರಗಳನ್ನು ಅಂಟಿಸಿ ಮಂಗಳವಾರ ಮಾತನಾಡಿದ ಅವರು, ಆರಂಭದಲ್ಲೇ ಸಮಸ್ಯೆ ಬಗೆಹರಿಸಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ. ವಾರ್ಡ್ ಬೀಟ್‌ಗಳಲ್ಲಿ 112 ತುರ್ತು ಸೇವೆ ಬಗ್ಗೆ ಹೆಚ್ಚಿನ ಮಾಹಿತಿ ಸಿಬ್ಬಂದಿ ನೀಡಲಿದ್ದಾರೆ, ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಲು, ಆಸ್ತಿಪಾಸ್ತಿ, ಜನರ ರಕ್ಷಣೆ, ಆರೋಗ್ಯ, ಪ್ರಾಣ ಹಾನಿ, ಅಪಘಾತ ಸೇರಿ ಯಾವುದೇ ಸಮಸ್ಯೆಗೆ ತಕ್ಷಣ ಪೊಲೀಸರ ಸಹಾಯ ಬೇಕಿದಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು, ಮೊಬೈಲ್ ಆ್ಯಪ್, ವಾಟ್ಸಾಪ್, ಇ-ಮೇಲ್ ಮೂಲಕ ಸಂದೇಶ ರವಾನಿಸಬಹುದು ಎಂದರು.

ಮಾಸ್ಕ್ ಧರಿಸಿ: ಕರೊನಾ ಅಲೆಯಿಂದ ಸಾವು, ನೋವು ಸಂಭವಿಸಿ ದೇಶದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ನಡುವೆ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ಎಚ್ಚರಗೊಂಡು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಪರಸಪರ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ಕ್ರಮಕೈಗೊಳ್ಳಬೇಕೆಂದು ಜಿ.ಆರ್.ರಮೇಶ್ ಮನವಿ ಮಾಡಿದರು.

ಸಿಪಿಐ ಡಿ.ಎಲ್.ರಾಜು ಮಾತನಾಡಿ, ಈ ಮೊದಲು ನಾಗರಿಕರು ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಆಂಬುಲೆನ್ಸ್ ಸೇವೆಗಾಗಿ ಬೇರೆ ಬೇರೆ ಸಂಖ್ಯೆಗಳಿಗೆ ಕರೆ ಮಾಡಬೇಕಾಗಿತ್ತು, ಇದೀಗ ಎಲ್ಲ ಇಲಾಖೆಗಳಿಗೆ ಒಂದು ತುರ್ತು ಕರೆ ಸಂಖ್ಯೆ ಗೊತ್ತುಪಡಿಸಲಾಗಿದೆ. ತುರ್ತು ಸಮಯದಲ್ಲಿ ತೊಂದರೆಗೆ ಒಳಗಾದ ವ್ಯಕ್ತಿಯನ್ನು ಮೊದಲು ಪೊಲೀಸ್ ಸಿಬ್ಬಂದಿಯೇ ಸಂಪರ್ಕಿಸಲಿದ್ದಾರೆ, ಅಪಘಾತ, ಅಪರಾಧ ಹಾಗೂ ವಿಪತ್ತು ಸಂಭವಿಸಿದಾಗ ಆ ಸ್ಥಳಕ್ಕೆ ಬಂದು ತಕ್ಷಣಕ್ಕೆ ಬೇಕಾದ ನೆರವು ನೀಡಿ ರಕ್ಷಣೆ ನೀಡಲಿದ್ದಾರೆ ಎಂದು ಹೇಳಿದರು.

ಸಾರಿಗೆ ನಿಯಮ ಪಾಲಿಸಿ: ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ರಿಕ್ಷಾ ಸೇರಿ ಯಾವುದೇ ವಾಹನಗಳು ರಸ್ತೆಯಲ್ಲಿ ನಿಲ್ಲಿಸಬಾರದು, ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಸಾರಿಗೆ ನಿಯಮ ಪಾಲಿಸುವ ಮೂಲಕ, ಅಪಘಾತಗಳನ್ನು ತಡೆಗಟ್ಟಬೇಕು. ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ವಾಹನಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಇಟ್ಟುಕೊಳ್ಳಬೇಕು, ಆಟೋ ಚಾಲಕರು ತಮ್ಮ ಕರ್ತವ್ಯವದಲ್ಲಿ ಕಡ್ಡಾಯವಾಗಿ ಖಾಕಿ ಸಮವಸ್ತ್ರ ದರಿಸಬೇಕು, ಮದ್ಯಪಾನ ಹಾಗೂ ಧೂಮಪಾನ ಮಾಡಬಾರದು, ಪ್ರಯಾಣಿಕರೊಂದಿಗೆ ಅಸಭ್ಯ ರೀತಿಯಲ್ಲಿ ನಡೆದುಕೊಳ್ಳದೇ ಸೌಜನ್ಯದಿಂದ ನಡೆದುಕೊಳ್ಳಬೇಕು, ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುವುದು ಕಾನೂನು ಅಪರಾಧವಾಗಿದೆ. ಇದರಿಂದ ಅಪಘಾತಗಳು ಹೆಚ್ಚಾಗಲಿದೆ ಎಂದು ಡಿವೈಎಸ್‌ಪಿ ಜಿ.ಆರ್.ರಮೇಶ್ ಎಚ್ಚರಿಕೆ ನೀಡಿದರು.