????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ; ಮಾಜಿ ಸಚಿವ ಡಿ.ನಾಗರಾಜಯ್ಯ ಟೀಕೆ

Tumakuru

ಕುಣಿಗಲ್ : ನನರ ನಿರೀಕ್ಷೆಗೆ ತಕ್ಕಂತೆ ಶಾಸಕ ಡಾ.ಎಚ್.ಡಿ.ರಂಗನಾಥ್ ಕೆಲಸ ಮಾಡುತ್ತಿಲ್ಲ. ಇದರಿಂದ ತಾಲೂಕು ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಮಾಜಿ ಸಚಿವರೂ ಆದ ಜೆಡಿಎಸ್ ಹಿರಿಯ ಮುಖಂಡ ಡಿ.ನಾಗರಾಜಯ್ಯ ಆರೋಪಿಸಿದರು.

ಪಟ್ಟಣದ ಎಸ್.ಎಸ್ ಪಾರ್ಟಿ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದದ ಅವಧಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ ಅನುದಾನ ಹಾಗೂ ಶಾಸಕನಾಗಿದ್ದಾಗ ತಾಲೂಕಿಗೆ ಮಂಜೂರು ಮಾಡಿಸಿದ್ದ ಅನುದಾನ ಹೊರತು ಪಡಿಸಿದರೆ, ಈಗಿನ ಶಾಸಕ ರಂಗನಾಥ್ ಹೊಸದಾಗಿ ಯಾವುದೇ ಅನುದಾನ ತಂದಿಲ್ಲ. ಹಳೇಯ ರಾಷ್ಟ್ರೀಯ ಹೆದ್ದಾರಿ 48, ಒಳಚರಂಡಿ, ಕೃಷಿ ಇಲಾಖೆ ಕಟ್ಟಡ, ಲೋಕೋಪಯೋಗಿ ಕಟ್ಟಡ, ಪುರಸಭೆ ಕಟ್ಟಡ ಸೇರಿ ಹಲವು ಅಭಿವೃದ್ಧಿ ಕಾರ್ಯಗಳು ನನ್ನ ಆಡಳಿತದ ಅವಧಿಯಲ್ಲಿ ಮಂಜೂರು ಮಾಡಿಸಿದ್ದೆ. ಆದರೆ, ಇದನ್ನು ನಾನು ಮಾಡಿಸಿದ್ದೇನೆ ಎಂದು ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜಕೀಯದಲ್ಲಿ ಹತ್ತಾರು ಮಂದಿಯನ್ನು ಬೆಳೆಸಿ ತಾಪಂ, ಜಿಪಂ, ಪುರಸಭೆಯಲ್ಲಿ ಅಧಿಕಾರ ಕೊಡಿಸಿದೆ. ಆದರೆ, ಅವರ‌್ಯಾರು ಪಕ್ಷದಲ್ಲಿ ಇಲ್ಲ. ಅಧಿಕಾರಕ್ಕಾಗಿ ಅನ್ಯ ಪಕ್ಷಗಳಿಗೆ ಹೋಗಿದ್ದಾರೆ. ವ್ಯಕ್ತಿಗಳಿಗಿಂತ ಪಕ್ಷ ದೊಡ್ಡದು, ಹಾಗಾಗಿ ಇದರ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪಕ್ಷವನ್ನು ಸಂಘಟಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಮತಗಳಿಸಿ ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಮುಂಬರುವ ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯಧ್ಯಕ್ಷ ಅನಂತರಾಮು, ರೈತ ಮೋರ್ಚಾ ಅಧ್ಯಕ್ಷ ರಂಗನಾಥ್, ಸೇವಾ ದಳದ ಅಧ್ಯಕ್ಷ ಕೆಂಪರಾಜು, ಜಿಲ್ಲಾ ವೀಕ್ಷಕ ಬೆಳ್ಳಿ ಲೋಕೇಶ್, ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಗ್ರಾಪಂ ಸದಸ್ಯ ತರಿಕೆರೆ ಪ್ರಕಾಶ್, ಮಾಜಿ ಸದಸ್ಯ ದೀಪು, ಮುಖಂಡರಾದ ಕೆ.ಎಲ್.ಹರೀಶ್, ತಮ್ಮಣ್ಣ ಇದ್ದರು.

ಹಣದ ಹೊಳೆ ಹರಿಸಿದ್ದಾರೆ: ಸಂಸದರು ಹಾಗೂ ಶಾಸಕರ ರೀತಿಯಲ್ಲಿ ಗಣಿಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಮಾಡಿ ಹಣ ಸಂಪಾದಿಸಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ತಾಲೂಕನ್ನು ಅಭಿವೃದ್ಧಿಪಡಿಸಿ ಜನರ ಸೇವೆ ಮಾಡಿದ್ದೇನೆ, ಆದರೆ ಇತ್ತೀಚಿಗೆ ನಡೆದ ಹಲವು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಅಧಿಕಾರ ಪಡೆದಿದ್ದಾರೆ. ಇದು ಬದಲಾಗಬೇಕು ಎಂದು ಮಾಜಿ ಸಚಿವ ಡಿ.ನಾಗರಾಜಯ್ಯ ತಿಳಿಸಿದರು.