???????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಆರೋಗ್ಯ, ಶಿಕ್ಷಣ, ಆರ್ಥಿಕ ವ್ಯವಸ್ಥೆ ಹಾಳು ; ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಆರೋಪ

Tumakuru

ಕುಣಿಗಲ್ : ದೇಶದಲ್ಲಿ ಆರೋಗ್ಯ, ಶಿಕ್ಷಣ, ಆರ್ಥಿಕ ವ್ಯವಸ್ಥೆ ಹಾಳಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ಹಾಗೂ ದುಡುಕು ನಿರ್ಧಾರವೇ ಕಾರಣ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಹುತ್ರಿದುರ್ಗ ಹೋಬಳಿ ಬುಕ್ಕಸಾಗರ ಗ್ರಾಮದಲ್ಲಿ ಮಂಗಳವಾರ ಡಿ.ಕೆ.ಚಾರಿಟಬಲ್ ಟ್ರಸ್ಟ್ ವತಿಯಿಂದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರೊನಾದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ಜನ ಸೋಂಕಿತರಾಗಿದ್ದಾರೆ, ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ, ದೇಶದ ಅರ್ಥ ವ್ಯವಸ್ಥೆ ಅಧೋಗತಿಗೆ ತಲುಪಿದೆ, ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಪ್ಯಾಕೇಜ್ ನೀಡಿದ್ದೇವೆ ಎಂದು ಎರಡರಿಂದ ಮೂರು ಸಾವಿರ ರೂ. ಮಾತ್ರ ಶ್ರಮಿಕ ವರ್ಗಕ್ಕೆ ಘೋಷಣೆ ಮಾಡಿದೆ, ಇದರಿಂದ ಅವರ ಜೀವನ ಸುಧಾರಣೆಯಾಗುತ್ತದಾ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಏನೇ ಸಾಧನೆ ಇರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾರೇ ಇರಲಿ, ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಿ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವವರ ಜೀವ ಉಳಿಸುವಂತಹ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಲಾಕ್‌ಡೌನ್ ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯ ದುಡಿದು ತಿನ್ನುವ ಬಡವರು, ಅಸಂಘಟಿತ ಕೂಲಿ ಕಾರ್ಮಿಕರು, ಒಪ್ಪೊತ್ತಿನ ಊಟಕ್ಕಾಗಿ ಪರಿತಪ್ಪಿಸುವಂತಾಗಿದೆ. ಸರ್ಕಾರ ಬಡವರ ನೆರವಿಗೆ ಮುಂದಾಗಿಲ್ಲ, ಆಂತರಿಕ ಕಚ್ಚಾಟದಲ್ಲಿ ತೊಡಗಿದೆ. ಹೀಗಾಗಿ ಬಡವರ ಬದುಕು ಕೇಳುವವರು ಯಾರೂ ಇಲ್ಲ, ಹಾಗಾಗಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ 75 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲಾಗುತ್ತಿದೆ ಎಂದು ಹೇಳಿದರು.

ಹುಲಿಯೂರುದುರ್ಗ, ಮಲ್ಲನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್, ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಜಿಪಂ ಮಾಜಿ ಸದಸ್ಯ ಗಂಗಶಾನಯ್ಯ, ಮುಖಂಡರಾದ ಕೋಘಟ್ಟ ರಾಜಣ್ಣ, ಶಾಂತರಾಜು ಇದ್ದರು.

10 ಸಾವಿರ ಪರಿಹಾರಕ್ಕೆ ಆಗ್ರಹ: ಲಾಕ್‌ಡೌನ್, ಅನ್ ಲಾಕ್‌ಡೌನ್ ಏನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಿ ಬಡ, ಮಧ್ಯಮ ವರ್ಗದ ಜನರಿಗೆ ಕನಿಷ್ಠ 10 ಸಾವಿರ ರೂ.ಪರಿಹಾರ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು. ರಾಜ್ಯ ಸರ್ಕಾರ ಎಲ್ಲರಿಗೂ ಆಹಾರ ಕೊಡುತ್ತೇವೆ ಎಂದು ಹೇಳುತ್ತಿದೆ, ಮತ್ತೊಂದೆಡೆ ಹೊಸ ಆದೇಶ ಹೊರಡಿಸಿ ಬಿಪಿಎಲ್ ಕಾರ್ಡ್‌ಗಳನ್ನು ಕಿತ್ತುಕೊಂಡು ಬಡವರ ಸಂಖ್ಯೆ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದರು.