ಕುಣಿಗಲ್ : ಐತಿಹಾಸಿಕ ಮೂಡಲ್ ಕುಣಿಗಲ್ ಕೆರೆ ಏರಿ ಬಿರುಕು ಬಿಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 12 ವರ್ಷಗಳ ಬಳಿಕ ಕೋಡಿ ಬಿದ್ದಿರುವ ಸಂತಸ ಹಸಿರಾಗಿರುವಾಗಲೇ ಬಿರುಕು ಕಾಣಿಸಿಕೊಂಡಿರುವುದು ಕಳವಳ ಮೂಡಿಸಿದೆ. ಇಷ್ಟಾದರೂ ಹೇಮಾವತಿ ನಾಲಾ ವಲಯ ಅಧಿಕಾರಿಗಳು ಮೌನವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಸಂಜೆ ಭೇಟಿ ನೀಡಿದ್ದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಆತಂಕ ವ್ಯಕ್ತಪಡಿಸಿದರಲ್ಲದೆ, ಹೇಮಾವತಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗಂಭೀರ ಆರೋಪ ಮಾಡಿದರು.
ಕೆರೆ ಏರಿ ಒಂದು ಅಡಿ ಬಿರುಕು: ಸುಮಾರು 60 ವರ್ಷಗಳ ಹಿಂದೆ ಏರಿ ಹೊಡೆದು ನಷ್ಟವಾಗಿತ್ತು. ಈ ಭಾರಿ ಹೇಮಾವತಿ ನೀರು ಹರಿದು ಕೆರೆ ಕೋಡಿಯಾದ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಏರಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಕೆರೆ ಏರಿ 1 ಅಡಿ ಆಳ, 120 ಮೀಟರ್‌ನಷ್ಟು ಉದ್ದ ಬಿರುಕು ಬಿಟ್ಟು ಸುಮಾರು ದಿನಗಳು ಕಳೆದರೂ ಅಧಿಕಾರಿಗಳು ಪರಿಶೀಲಿಸಿಲ್ಲ, ಅನಾಹುತ ಸಂಭವಿಸುವ ಮೊದಲು ದುರಸ್ತಿಗೆ ಕ್ರಮಕೈಗೊಳ್ಳುವಂತೆ ಎಚ್ಚರಿಸಿದರು.
ಡಿಕೆಸು ವಿರುದ್ಧ ವಾಗ್ದಾಳಿ : ದೊಡ್ಡಕೆರೆಯಿಂದ ಮಾಗಡಿ ತಾಲೂಕಿನ ಕೆರೆಗಳಿಗೆ ಹಾಗೂ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲೂಕಿಗೆ ನೀರು ಹರಿಸಲು ಹೊರಟ್ಟಿರುವ ಸಂಸದ ಡಿ.ಕೆ.ಸುರೇಶ್, ನಮ್ಮ ತಾಲೂಕಿನ ಜನರಿಗೆ ವಿಷವುಣಿಸಿ ಬೇರೆ ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಡಲು ಹೊರಟ್ಟಿದ್ದಾರೆ. ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದ ಅವರು ಮೇಕೆದಾಟು ಯೋಜನೆ ವಿಚಾರವಾಗಿ ಪಾದಯಾತ್ರೆ ಕೈಗೊಂಡಿರುವುದರ ಹಿಂದೆ ಅವರಿಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಪುರಸಭಾ ಸದಸ್ಯರಾದ ಕೋಟೆ ನಾಗಣ್ಣ, ಆನಂದ್‌ಕುಮಾರ್ (ಕಾಂಬ್ಲಿ) ಗೋಪಿ ಅರಸ್, ಶಿವಕುಮಾರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ್ ಇದ್ದರು.
ಪೂಜೆಗೆ ಸೀಮಿತವಾದ ಶಾಸಕ : ಶಾಸಕ ಡಾ.ಎಚ್.ಡಿ.ರಂಗನಾಥ್ ಬಿರುಕು ಬಿಟ್ಟಿರುವ ಕೆರೆ ಏರಿ ದುರಸ್ತಿ ಸಂಬಂಧ ಕ್ರಮಕೈಗೊಳ್ಳದೆ ಪ್ರಚಾರಕ್ಕಾಗಿ ಗಂಗಾ ಪೂಜೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ತಾಲೂಕಿನ ಜೀವನಾಡಿ ಆಗಿರುವ ಐತಿಹಾಸಿಕ ಕೆರೆಯ ಸಂರಕ್ಷಣೆಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಡಿ.ಕೃಷ್ಣಕುಮಾರ್ ಹರಿಹಾಯ್ದರು.