ಶ್ರೀನಿವಾಸ್ ಟಿ.ಹೊನ್ನಾಳಿ: ಶ್ರೀ ಆಂಜನೇಯ ಸ್ವಾಮಿಯ ಕ್ಷೇತ್ರವಾದ ಕುಂದೂರು ಗ್ರಾಮದ ಕೆರೆಗೆ ಹೂಳು, ಒತ್ತುವರಿ ಸಮಸ್ಯೆ ಜತೆಗೆ ಜಲಕಳೆಯಿಂದಾಗಿ ತನ್ನ ಸ್ವರೂಪವನ್ನೇ ಕಳೆದುಕೊಂಡಂತಿದೆ.
ಬಸವಾಪಟ್ಟಣ ವ್ಯಾಪ್ತಿಗೆ ಸೇರುವ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ 53.26 ಎಕರೆಯ ಕೆರೆ, ಸುತ್ತಲೂ ಜಮೀನುಗಳಿಂದ ಅಂದಾಜು 15 ಎಕರೆ ಒತ್ತುವರಿಯಾಗಿದೆ. ಹೂಳು ತುಂಬಿಕೊಂಡು ಬಳಸಲಾಗುತ್ತಿಲ್ಲ. ಕೆರೆಯಂಗಳದಲ್ಲಿ ಜಲಕಳೆ ತುಂಬಿಕೊಂಡಿದೆ. ಅದರ ಸುತ್ತಲು ಗಿಡ ಗಂಟಿಗಳು ಬೆಳೆದು ಕೆರೆ ಇದೆಯೋ ಇಲ್ಲವೋ ಎಂಬಂತಿದೆ ಎಂಬುದು ಕೆಲವರ ದೂರು.
ಈ ಕೆರೆಯಲ್ಲಿ ಮೊದಲು ಬಟ್ಟೆ ತೊಳೆಯುತ್ತಿದ್ದರು, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿತ್ತು. ಈ ಕೆರೆ ತುಂಬಿದಾಗ ಅಕ್ಕಪಕ್ಕದ ಜಮೀನುಗಳ ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗಿತ್ತು. ಆದರೆ, ಈಗ ಮಳೆ ಇಲ್ಲ, ಹೂಳು ತುಂಬಿದೆ. ಇದರಿಂದ ಜನ- ಜಾನುವಾರುಗಳಿಗೆ ಬಳಕೆ ಆಗುತ್ತಿಲ್ಲ. 2013 ರಿಂದ 2018ರಲ್ಲಿ ಶಾಸಕರಾಗಿದ್ದ ಡಿ.ಜಿ.ಶಾಂತನಗೌಡ ಅವರು ಕುಂದೂರು ಕೆರೆಯ ಹೂಳು ತೆಗೆಸಿದ್ದರು.
ಎರಡು ತಾಲೂಕುಗಳಲ್ಲಿ 12 ಕೆರೆ: ಹೊನ್ನಾಳಿ- ನ್ಯಾಮತಿ ತಾಲೂಕಿನ ಸಣ್ಣ ನೀರಾವರಿ ಇಲಾಖೆಗೆ ಸೇರಿದ 12 ಕೆರೆಗಳಿದ್ದು, ಹೊನ್ನಾಳಿ ತಾಲೂಕಿನ ತರಗನಹಳ್ಳಿಯಲ್ಲಿ 14 ಹೆಕ್ಟೇರ್, ಚೀಲಾಪುರದಲ್ಲಿ 41.6 ಹೆಕ್ಟೇರ್, ಹಿರೇಗೋಣಿಗೆರೆ 26.6, ಕೋಣನತಲೆ 12 ಹೆ. ಎಚ್.ಗೋಪಗೊಂಡನಹಳ್ಳಿ 12 ಹೆ, ಸೊರಟೂರು 21.25 ಹೆ, ಕತ್ತಿಗೆ 41.26 ಹೆ, ಬೈರನಹಳ್ಳಿ 15 ಹೆ ಹಾಗೂ ನ್ಯಾಮತಿ ತಾಲೂಕಿನ ಚಟ್ನಹಳ್ಳಿ 15 ಹೆ, ಸವಳಂಗ ಕೆರೆ 38.9 ಹೆ, ಚಿನ್ನಿಕಟ್ಟೆ 20.10, ಸವಳಂಗ ಹೊಸಕೆರೆ 348.40 ಹೆಕ್ಟೇರ್ ಪ್ರದೇಶದಲ್ಲಿ ಕೆರೆಗಳಿವೆ. ಆದರೆ, ಕೆಲವು ಕೆರೆಗಳಲ್ಲಿ ಹೂಳು ತೆಗೆದಿಲ್ಲ. ಕೆಲವು ಕೆರೆಗಳು ಒತ್ತುವರಿಯಾಗಿದ್ದು, ಸಂಬಂಧಿತ ಇಲಾಖೆ ಅಧಿಕಾರಿಗಳು ಮಾತ್ರ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಸಮಾಧಾನ.
ಹೊನ್ನಾಳಿ- ನ್ಯಾಮತಿ ತಾಲೂಕಿನ ಕೆಲವು ಕೆರೆಗಳು ಒತ್ತುವರಿಯಾಗಿದೆ ಎಂದು ಕೆಲವರು ದೂರಿದ್ದಾರೆ. ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಕೆರೆಗಳ ಪಟ್ಟಿ ಮಾಡಿಸಿ ನಂತರ ತೆರವು ಮಾಡಿಸುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳುತ್ತೇನೆ. ಅವಳಿ ತಾಲೂಕಿನ 70 ಕೆರೆಗಳಲ್ಲಿ ಹೂಳು ತೆಗೆಸಬೇಕು ಎಂಬುದರ ಬಗ್ಗೆ ಚರ್ಚಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುತ್ತೇನೆ.
l ಡಿ.ಜಿ.ಶಾಂತನಗೌಡ , ಶಾಸಕ ಹೊನ್ನಾಳಿ ತಾಲೂಕು.
ಕುಂದೂರು ಕೆರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಬಸವಾಪಟ್ಟಣ ಭದ್ರನಾಲಾ ಉಪವಿಭಾಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಮಾಡಿದ ಮನವಿ ಫಲ ನೀಡಿಲ್ಲ. ಶಾಸಕರು ಗಮನ ಹರಿಸಿ ಕೆರೆ ಒತ್ತುವರಿ ಜಾಗ ತೆರವುಗೊಳಿಸಿ ಹದ್ದುಬಸ್ತು ಮಾಡಿಸಿ, ಹೂಳು ತೆಗೆಸಿ ಸಾರ್ವಜನಿಕರಿಗೆ ಬಳಸಲು ಅವಕಾಶ ಮಾಡಿಕೊಡಬೇಕು.
l ಪ್ರಸನ್ನಕುಮಾರ್, ಸಾಮಾಜಿಕ ಕಾರ್ಯಕರ್ತ, ಹೊನ್ನಾಳಿ.
ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ 12 ಕೆರೆಗಳು ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅವುಗಳಲ್ಲಿ ಒತ್ತುವರಿಯಾದ ಬಗ್ಗೆ ನಾವೇ ಸಮೀಕ್ಷೆ ಮಾಡಿ, ಒತ್ತುವರಿ ಕಂಡುಬಂದರೆ ಕೂಡಲೇ ಸರ್ವೆ ಮಾಡಿಸಿ ಶಾಸಕರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಒತ್ತುವರಿ ತೆರವು ಮಾಡಿಸಿ ಕೆರೆ ಹದ್ದುಬಸ್ತು ಮಾಡಿಸುತ್ತೇವೆ.
l ಎಲ್.ಪಿ.ಆನಂದಪ್ಪ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ, ಹೊನ್ನಾಳಿ ತಾಲೂಕು.