ಜಿಲ್ಲೆ

ಕುಂದು-ಕೊರತೆ ಸಭೆ

Davangere - Desk - Mahesh Babu E

ವಿಜಯವಾಣಿ ವಿಶೇಷ ಚಳ್ಳಕೆರೆ: ಬಹಳ ವರ್ಷಗಳ ಬಳಿಕ ನಗರಸಭೆ ಸಭಾಂಗಣದಲ್ಲಿ ಸೆ.28ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕುಂದು-ಕೊರತೆ ಸಭೆ ಆಯೋಜಿಸಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ ನಗರದ ಅನೇಕ ಸಮಸ್ಯೆಗಳು ಅನಾವರಣಗೊಳ್ಳುವ ಸಾಧ್ಯತೆ ಹೆಚ್ಚು ಇದೆ.

13 ಸಾವಿರ ಕುಟುಂಬಗಳ 31 ವಾರ್ಡ್‌ಗಳ ನಗರಸಭಾ ವ್ಯಾಪ್ತಿಯಲ್ಲಿ 70 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವಾರ್ಡ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ, ಖಾತೆ, ಇ-ಸ್ವತ್ತು ನಿರ್ವಹಣೆ ಮಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ದಟ್ಟವಾಗಿದ್ದು, ಸಭೆಯಲ್ಲಿ ಈ ಕುರಿತು ಜನರು ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ ಸುರಿಸುವ ಸಾಧ್ಯತೆ ಇದೆ.

ನಗರಸಭೆಗೆ ಸಂದಾಯವಾಗುತ್ತಿರುವ ಕಂದಾಯ ಮತ್ತು ಸಂಪನ್ಮೂಲ ಸಮರ್ಪಕ ಬಳಕೆ ಆಗುತ್ತಿಲ್ಲ. ಗಾಂಧಿನಗರ, ಜನತಾ ಕಾಲನಿ, ಅಂಬೇಡ್ಕರ್ ನಗರ, ಮಹದೇವಿ ರಸ್ತೆ ಭಾಗದ ಫಲಾನುಭವಿಗಳಿಗೆ 40 ವರ್ಷಗಳಿಂದ ಹಕ್ಕುಪತ್ರ ಸಿಕ್ಕಿಲ್ಲ. ಕೆಲ ಪಾರ್ಕ್ ಮತ್ತು ರಾಜ ಕಾಲುವೆಗಳ ಒತ್ತುವರಿ ತೆರವು ಕಾರ್ಯ ಅನುಷ್ಠಾನಗೊಳ್ಳುತ್ತಿಲ್ಲ.

ರಹಿಂನಗರ, ಆಸರ್ ಮೊಹಲ್ಲಾ ಸೇರಿ ಕೆಲ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ವರ್ಷಗಳೆ ಕಳೆದಿದ್ದರೂ ದುರಸ್ತಿ ಭಾಗ್ಯ ಕಂಡಿಲ್ಲ. ಇಂತಹ ನೂರಾರು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರ ಅಧ್ಯಕ್ಷತೆಯ ಕುಂದು-ಕೊರತೆ ಸಭೆ ದಾರಿಯಾಗಲಿದೆಯೇ ಎಂಬ ಕುತೂಹಲ ಜನರಲ್ಲಿದೆ.

ಅಲೆದಾಟ ಹೆಚ್ಚು: ಖಾತೆ ಮತ್ತು ಇ-ಸ್ವತ್ತು ಸೇರಿ ಸಾರ್ವಜನಿಕರ ಯಾವ ಕೆಲಸ ಕಾರ್ಯಗಳು ನಗರಸಭೆಯಲ್ಲಿ ಸಕಾಲಕ್ಕೆ ಆಗುತ್ತಿಲ್ಲ. ದಾಖಲೆ ಕಳೆಯುವುದು, ತಿರುವುದು ಸಾಮಾನ್ಯವಾಗಿದೆ. ಸಣ್ಣ ಕೆಲಸಕ್ಕೂ ಜನರನು ಅಲೆದಾಡಿಸುತ್ತಾರೆ. ಶಾಸಕರು ಈ ಕುರಿತು ಜನರ ಸಮಸ್ಯೆ ಆಲಿಸಲು ಸಭೆ ಆಯೋಜಿಸಿರುವುದು ಉತ್ತಮ. ಜತೆಗೆ ಸಭೆ ಫಲ ನೀಡಬೇಕು ಎಂಬುದು ಸ್ನೇಹ ಬಳಗ ಅಧ್ಯಕ್ಷ ನೇತಾಜಿ ಪ್ರಸನ್ನ ಅವರ ಆರೋಪ

ಅವ್ಯವಹಾರ ಹೆಚ್ಚು: ಪೌರಕಾರ್ಮಿಕರಿಗೆ ಸರಿಯಾಗಿ ವೇತನ ಆಗುತ್ತಿಲ್ಲ. ಹೊರಗುತ್ತಿಗೆ ಅವಧಿ ಮುಗಿದಿದ್ದರೂ ಟೆಂಡರ್ ಕರೆಯುತ್ತಿಲ್ಲ. 24.10 ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳುತ್ತಿಲ್ಲ. ಎಫ್‌ಸಿ ಮತ್ತು ವಿಮೆ ಇಲ್ಲದ ವಾಹನಗಳನ್ನು ಕಸ ಸಂಗ್ರಹ ಕಾರ್ಯಕ್ಕೆ ಬಳಸಲಾಗುತ್ತಿದೆ. ಕಸ ಸಂಗ್ರಹ ವಾಹನಗಳ ಹೆಸರಲ್ಲಿ ಡೀಸೆಲ್ ದುರ್ಬಳಕೆ ಆಗುತ್ತಿದೆ. 40 ವರ್ಷಗಳಿಂದ ಬಡಕುಟುಂಬಗಳಿಗೆ ಹಕ್ಕುಪತ್ರ ಮತ್ತು ಖಾತೆ ಸೌಲಭ್ಯ ಸಿಕ್ಕಿಲ್ಲ. ಸಭೆಯಲ್ಲಿ ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು ಎಂಬುದು ದಸಂಸ ಸಂಚಾಲಕ ಟಿ.ವಿಜಯಕುಮಾರ್ ಒತ್ತಾಯ.

ಕಳ್ಳತನಕ್ಕೆ ಬೇಕು ಕಡಿವಾಣ: ವಿಸ್ತಾರವಾಗಿ ಬೆಳೆಯುತ್ತಿರುವ ನಗರದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಪ್ರಮುಖ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಾರದ ಸಂತೆಯಲ್ಲಿ ಕಳ್ಳತನ ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆ ಚುರುಕುಗೊಳಿಸಬೇಕು ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಜಗದೀಶ್ ಒತ್ತಾಯಿಸಿದ್ದಾರೆ.