ಕುಂದಗೋಳ: ತಾಲೂಕಿನ ರೊಟ್ಟಿಗವಾಡ, ಯರಗುಪ್ಪಿ, ಕೊಡ್ಲಿವಾಡ, ಬರದ್ವಾಡ ಗ್ರಾಮಗಳ ಪಕ್ಕದಲ್ಲಿರುವ ಹಳ್ಳಗಳಿಂದ ಅಕ್ರಮ ಉಸುಕು ಸಂಗ್ರಹ, ಸಾಗಾಟ ಮತ್ತು ಮಾರಾಟ ಎಗ್ಗಿಲ್ಲದೇ ಸಾಗಿದೆ. ದಂಧೆಕೋರರು ಹಗಲು-ರಾತ್ರಿ ಎನ್ನದೆ ಟ್ರ್ಯಾಕ್ಟರ್ಗಳಲ್ಲಿ ಉಸುಕು ತುಂಬಿಕೊಂಡು ಗ್ರಾಮದಲ್ಲಿ ಯಾರಿಗೂ ಕಾಣದಂಥ ಸ್ಥಳಗಳಲ್ಲಿ ಶೇಖರಣೆ ಮಾಡುತ್ತಾರೆ. ಬಳಿಕ ಆ ಉಸುಕನ್ನು ಒಂದು ಟ್ರಿಪ್ಗೆ 3 ರಿಂದ 4 ಸಾವಿರ ರೂ.ಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ರೊಟ್ಟಿಗವಾಡದಿಂದ ಕೋಳಿವಾಡ ರಸ್ತೆ, ರೊಟ್ಟಿಗವಾಡ- ಕೊಡ್ಲಿವಾಡ ರಸ್ತೆಯ ಪಕ್ಕ ಹಾಗೂ ರೊಟ್ಟಿಗವಾಡ ಗ್ರಾಮದ ಹೊರವಲಯದಲ್ಲಿ ಹೇರಳವಾಗಿ ಉಸುಕು ಸಂಗ್ರಹ ಮಾಡಲಾಗುತ್ತಿದೆ. ನಾಲ್ಕೈದು ಗ್ರಾಮಗಳಲ್ಲಿ ಕೆಲವರು ಏಳೆಂಟು ಟ್ರ್ಯಾಕ್ಟರ್ ಇಟ್ಟುಕೊಂಡು ದಿನಕ್ಕೆ ಅಂದಾಜು 50 ರಿಂದ 60 ಟ್ರಿಪ್ ಉಸುಕು ಸಾಗಾಟ ಮಾಡುತ್ತಾರೆ. ನಿತ್ಯ ಹಳ್ಳದಿಂದ ಉಸುಕು ಅಗೆಯುತ್ತಿರುವುದರಿಂದ ಅಂತರ್ಜಲ ಮಟ್ಟ, ಮಣ್ಣಿನ ಸವಕಳಿ, ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ ಎಂಬುದು ರೈತರ ದೂರು. ಸಂಬಂಧಿಸಿದ ತಹಸೀಲ್ದಾರ್ರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಅಕ್ರಮ ಉಸುಕು ಸಂಗ್ರಹ ಮತ್ತು ಮಾರಾಟ ಮಾಡದಂತೆ ಆದೇಶ ಹೊರಡಿಸಿದೆ. ಆದರೆ, ಅವುಗಳ ಪಾಲನೆ ಆಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಅಧಿಕಾರಿಗಳು ಮರಳು ಮಾಫಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಅಕ್ರಮ ಉಸುಕು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಮರಿ ನಾಯಕರು ಹಳ್ಳದ ಅಕ್ಕ ಪಕ್ಕದಲ್ಲಿರುವ ಸಿಕ್ಕ ಸಿಕ್ಕ ರೈತರ ಜಮೀನಿನಲ್ಲಿ ದಾರಿ ಮಾಡಿಕೊಂಡು ಉಸುಕು ಸಾಗಿಸುತ್ತಿದ್ದಾರೆ. ಇದರಿಂದ ರಸ್ತೆಗಳೆಲ್ಲ ಹಾಳಾಗಿದ್ದು, ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಉಸುಕು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ರೊಟ್ಟಿಗವಾಡ ಗ್ರಾಮದ ಮುದಕ್ಕಪ್ಪ, ಸಿದ್ದಪ್ಪ , ಮಂಜುನಾಥ, ಯರಗುಪ್ಪಿ ಗ್ರಾಮದ ರಾಜೇಶ, ಯಲ್ಲಪ್ಪ, ಸಂತೋಷ ರವಿ ಇತರರು ಒತ್ತಾಯಿಸಿದ್ದಾರೆ.
ಟ್ರ್ಯಾಕ್ಟರ್ಗಳಲ್ಲಿ ಅಕ್ರಮವಾಗಿ ಹಳ್ಳದ ಉಸುಕು ತುಂಬಿಕೊಂಡು ಹೋಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅವರೊಟ್ಟಿಗೆ ಇವರೂ ಕೈ ಜೋಡಿಸಿದ್ದಾರೆ ಎಂಬ ಸಂಶಯ ಬರುತ್ತಿದೆ. ಉಸುಕು ತುಂಬುವ ಹಳ್ಳಗಳಿಗೆ ಭೇಟಿ ನೀಡದೆ, ಪ್ರಕೃತಿ ವಿಕೋಪಕ್ಕೆ ಕಾರಣರಾಗುತ್ತಿದ್ದಾರೆ. | ಸಿದ್ದನಗೌಡ ರೈತ ಗ್ರಾಮೀಣ ಭಾಗದ ಹಳ್ಳದಲ್ಲಿ ಅಕ್ರಮವಾಗಿ ಹಳ್ಳದ ಉಸುಕು ತೆಗೆದುಕೊಂಡು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಉಮೇಶ ಬಗರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧಾರವಾಡ ತಾಲೂಕಿನ ಕೆಲ ಗ್ರಾಮಗಳ ಹಳ್ಳಗಳಲ್ಲಿ ಮರಳು ದಂಧೆ ನಡೆಯುತ್ತಿದೆ ಎಂಬ ದೂರುಗಳಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸುತ್ತೇನೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆಯುತ್ತೇನೆ. ಅಕ್ರಮವಾಗಿ ಉಸುಕು ಸಂಗ್ರಹ ಮತ್ತು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. | ರಾಜು ಮಾವರಕರ, ತಹಸೀಲ್ದಾರ್ ಕುಂದಗೋಳ ಹಳ್ಳದಲ್ಲಿ ಉಸುಕು ತುಂಬಿಕೊಂಡು ಹೋಗುವುದು ತಪ್ಪು. ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದೆ. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಅಗತ್ಯಬಿದ್ದರೆ ಬೀಟ್ ವ್ಯವಸ್ಥೆ ಮಾಡುತ್ತೇವೆ. | ಶಿವಾನಂದ ಅಂಬಿಗೇರ, ಸಿಪಿಐ ಕುಂದಗೋಳ