ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಗಿರಿಜನರು ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪಸ್ವಾಮಿ ದೇವರ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು.
ಹಳ್ಳಿ ಹಳ್ಳಿಗಳಲ್ಲಿ ಭಿಕ್ಷೆ ಬೇಡುತ್ತಾ ದೇವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಕುಣಿದು-ಕುಪ್ಪಸುತ್ತಾ ಕುಂಡೆಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು.
ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ, ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಯುವ ಈ ಹಬ್ಬಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಕಾಡಿನಲ್ಲಿ ಸಿಗುವ ಸೊಪ್ಪು, ಹಳೇ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷಗಳನ್ನು ತೊಟ್ಟು ಸಿಕ್ಕ-ಸಿಕ್ಕವರನ್ನು ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ದವಸ ಧಾನ್ಯಗಳನ್ನು ಸಂಗ್ರಹಿಸಿದರು.
ಈ ಹಬ್ಬವನ್ನು ಮೂಲ ನಿವಾಸಿ ಗಿರಿಜನ ಜನಾಂಗಕ್ಕೆ ಸೇರಿದ ಜೇನು ಕುರುಬ, ಬೆಟ್ಟಕುರುಬ ಜನಾಂಗಕ್ಕೆ ಸೇರಿದ ಬುಡಕಟ್ಟು ಜನರು ಹೆಚ್ಚಾಗಿ ಆಚರಿಸುವ ಈ ಕುಂಡೆ ಹಬ್ಬದ ಸಂಭ್ರಮದಲ್ಲಿ ಕೊಡಗಿನ ಕಾಡಂಚಿನ ಜನರು ಸಹ ಸೇರಿ ಆಚರಿಸುವರು.
ಕುಂಡೆ ಹಬ್ಬದ ಹಿನ್ನೆಲೆ: ಈ ಹಿಂದೆ ಜಮೀನುದಾರರು ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರನ್ನು ವರ್ಷವಿಡೀ ಬೈಯ್ಯುತ್ತಾ ದುಡಿಸಿಕೊಳ್ಳುತ್ತಿದ್ದರು. ಇದನ್ನು ಗಿರಿಜನರು ದೇವರ ಹಬ್ಬದ ನೆಪದಲ್ಲಿ ಒಂದು ದಿನ ಜಮೀನುದಾರರಿಗೆ ಬೈದು ಗಿರಿಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದರು. ದೇವರಲ್ಲಿ ಪೂಜೆ ಸಲ್ಲಿಸಿ ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಈ ಕುಂಡೆಹಬ್ಬದ ವಿಶೇಷವಾಗಿದೆ. ಪ್ರತಿ ವರ್ಷದ ಮೇ ತಿಂಗಳ ಕೊನೆಯ ಬುಧವಾರದಂದು ಗಿರಿಜನರು ವಿವಿಧ ವೇಷ ಧರಿಸಿ ಆಚರಣೆ ಮಾಡುತ್ತಾರೆ. ದೇವರಲ್ಲಿ ಹೆಚ್ಚು ಭಯ, ಭಕ್ತಿ ಇರುವ ಈ ಜನಾಂಗ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ವೇಷ ಹಾಕುತ್ತಾರೆ. ನಂತರ ಕಾಲ್ನಡಿಕೆಯಲ್ಲೇ ಸುತ್ತಮುತ್ತಲ ಹಳ್ಳಿ ಸೇರಿದಂತೆ ನಗರಪ್ರದೇಶಗಳಲ್ಲಿ ಸುತ್ತಾಡಿ ಭಿಕ್ಷೆ ಬೇಡುತ್ತಾರೆ.
ವಿಶೇಷ ಪೂಜೆ:
ಕಾಡಿನ ದಾರಿಯಲ್ಲೇ ನಡೆದು ತೆರಳಿ ವಸೂಲಿ ಮಾಡಿದ ಹಣ ಮತ್ತು ದವಸ-ಧಾನ್ಯಗಳನ್ನು ವಿರಾಜಪೇಟೆ ರಸ್ತೆಯಲ್ಲಿರುವ ತಿತಿಮತಿ ಪಕ್ಕ ಇರುವ ದೇವರಪುರದಲ್ಲಿರುವ ಅಯ್ಯಪ್ಪ ಹಾಗೂ ಭದ್ರಕಾಳಿ ದೇವಾಲಯಕ್ಕೆ ಅರ್ಪಿಸುತ್ತಾರೆ. ಬಳಿಕ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.