ಜಿಲ್ಲೆ

ಭಾಷೆ, ಸಂಸ್ಕೃತಿಗೆ ಕುಂದಾಪುರ ಕೊಡುಗೆ ದೊಡ್ಡದು

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ಭಾಷೆ, ಸಂಸತಿ, ಆಚಾರ ವಿಚಾರವನ್ನು ಯಾವತ್ತೂ ಮರೆಯಬಾರದು. ಕುಂದಾಪುರ ಒಂದು ಚಿಕ್ಕ ಪ್ರದೇಶವಾದರೂ ಕುಂದಾಪುರಿಗರ ಸಾಧನೆ ದೊಡ್ಡದು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಟೀಮ್​ ಕುಂದಾಪುರಿಯನ್ಸ್​ ವತಿಯಿಂದ ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ಕುಂದಾಪ್ರ ಕನ್ನಡ ಉತ್ಸವ'ದಲ್ಲಿ ಮಾತನಾಡಿದರು.

ದೂರದ ಕರಾವಳಿಯ ಕುಂದಾಪುರದಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರೂ ತಾಯಿ ನೆಲದ ಸಂಸತಿಯನ್ನು ಬಿಡದೇ ಕುಂದಾಪುರ ಕನ್ನಡದ ಕಂಪನ್ನು ಟೀಮ್​ ಕುಂದಾಪುರಿಯನ್ಸ್​ ಪಸರಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಿಂದ ಕೊಲ್ಲೂರು ಮೂಕಾಂಬಿಕೆಯ ಟ್ಯಾಬ್ಲೋ ಮೆರವಣಿಗೆ ಹಾಗೂ ಸಂಕಲ್ಪಯಾತ್ರೆ ಹಮ್ಮಿಕೊಳ್ಳಲಾಯಿತು. ನಾಗಸಾಧುಗಳಾದ ಧನಂಜಯ ಗಿರಿ ಮಹರಾಜ್​, ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ, ಬೇಳೂರು ರಾಘವೇಂದ್ರ ಶೆಟ್ಟಿ, ಕುಂದಾಪುರ ಪ್ರತಿಷ್ಠಾನ ಅಧ್ಯಕ್ಷ ದೀಪಕ್​ ಶೆಟ್ಟಿ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.

ವೈವಿಧ್ಯಮಯ ಕಾರ್ಯಕ್ರಮ

ಕುಂದಾಪುರ ಕನ್ನಡ ಉತ್ಸವದಲ್ಲಿ ಕುಂದಾಪುರ ಪರಿಸರದ ಹಳೆಯ ಕಾಲದ ವಸ್ತುಗಳ ಪ್ರದರ್ಶನ, ಸಂಸತಿ ಶಿಬಿರ, ಅಹಾರ ಮೇಳ, ಯಕ್ಷಗಾನ, ಕುಂದಾಪುರ ಸಂಸತಿಯ ನೃತ್ಯರೂಪಕ, ಲಗೋರಿ, ಗೋಣಿಚೀಲ ಓಟ, ಕಪ್ಪೆ ಜಿಗಿತ ಸೇರಿ ವಿವಿಧ ಕ್ರೀಡೆಗಳು ಜನರ ಮನ ಸೆಳೆದವು.