ಕುಂದಾಪುರ: ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಮೋಹನದಾಸ ಶೆಣೈ, ಉಪಾಧ್ಯಕ್ಷೆಯಾಗಿ ಬಿಜೆಪಿಯ ವನಿತಾ ಎಸ್.ಬಿಲ್ಲವ ಆಯ್ಕೆಯಾಗಿದ್ದಾರೆ.
ಪುರಸಭೆ 23 ಸ್ಥಾನಗಳನ್ನು ಹೊಂದಿದ್ದು, ಈ ಪೈಕಿ 14 ಸ್ಥಾನಗಳನ್ನು ಗೆದ್ದು ಬಿಜೆಪಿ ಸ್ಪಷ್ಟಬಹುಮತ ಪಡೆದಿದೆ. ಕಾಂಗ್ರೆಸ್ 8 ಸ್ಥಾನ ಪಡೆದಿದ್ದರೆ, ಒಂದು ಸ್ಥಾನ ಪಕ್ಷೇತರ ಸದಸ್ಯೆ ಪಾಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಮೋಹನದಾಸ ಶೆಣೈ, ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಎಸ್.ಬಿಲ್ಲವ, ಪಕ್ಷೇತರ ಸದಸ್ಯೆ ಕಮಲಾ ಪೂಜಾರಿ ಸ್ಪ್ಪರ್ಧಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮೋಹನದಾಸ ಶೆಣೈ 16 ಮತಗಳನ್ನು, ಕಾಂಗ್ರೆಸ್‌ನ ಚಂದ್ರಶೇಖರ ಖಾರ್ವಿ ಪರವಾಗಿ 8 ಮತಗಳನ್ನು ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ವನಿತಾ ಎಸ್.ಬಿಲ್ಲವ 16 ಮತಗಳನ್ನು, ಪಕ್ಷೇತರ ಕಮಲಾ ಪೂಜಾರಿ ಸದಸ್ಯೆ 8 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್‌ನ ಸದಸ್ಯೆ ಲಕ್ಷ್ಮೀ ಬಾಯಿ ಗೈರು ಹಾಜರಾಗಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದರು.
ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪುರಸಭೆ ಮುಖ್ಯಾಧಿಕಾರಿ ಆನಂದ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ ಶೆೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ ಪೂಜಾರಿ, ಸುಧೀರ ಕೆ.ಎಸ್., ಜಿಲ್ಲಾ ಉಪಾಧ್ಯಕ್ಷ ಕಾಡೂರು ಸುರೇಶ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಸದಾನಂದ ಬಳ್ಕೂರು, ಭಾಸ್ಕರ ಬಿಲ್ಲವ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ದಿವಾಕರ ಕಡ್ಗಿಮನೆ, ಪುಷ್ಪಾ ಶೇಟ್, ಬಿಜೆಪಿ ಮುಖಂಡರು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.