ಜಿಲ್ಲೆ

ರಾಜಧಾನಿಯಲ್ಲಿ ಆ.17, 18ರಂದು ಕುಂದಾಪ್ರ ಕನ್ನಡ ಹಬ್ಬ

ಬೆಂಗಳೂರು: ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ ‘ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ’ವನ್ನು ಆಚರಣೆ ಮಾಡುತ್ತಿದ್ದು, ಈ ಸಲ ಬೆಂಗಳೂರಿನಲ್ಲಿ ಅದು ಎಂದಿಗಿಂತ ಅದ್ಧೂರಿಯಾಗಿ ನಡೆಯಲಿದೆ.

ಎರಡು ದಿನ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆ.17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ. ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಈ ಬಾರಿ ಹೆಚ್ಚಿನ ಜನರು ಆಗಮಿಸಲಿರುವ ಕಾರಣ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ‘ನಾಕ್ ಘನಾ ಸುರ್ಲ್’ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ದೇಶಕರು ಸೇರಿ ಹಲವು ತಾರೆಯರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಪದಾಧಿಕಾರಿಗಳಾದ ನರಸಿಂಹ ಬೀಜಾಡಿ, ರಾಘವೇಂದ್ರ ಕಾಂಚನ್, ವಿಜಯ್ ಶೆಟ್ಟಿ ಹಾಲಾಡಿ, ಅಜಿತ್ ಶೆಟ್ಟಿ ಉಳ್ತೂರು, ಆರ್.ಉಪೇಂದ್ರ ಶೆಟ್ಟಿ, ಹೋಟೆಲ್ ಉದ್ಯಮಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನ?

ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ 5 ವರ್ಷಗಳಿಂದ ಪ್ರತಿ ವರ್ಷ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆ.4ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆ.17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.

ಇದು ಸಣ್ಣ ಆಲೋಚನೆ ಅಲ್ಲ. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನವಾಗಿದೆ.

- ರವಿ ಬಸ್ರೂರು, ಸಂಗೀತ ನಿರ್ದೇಶಕ