ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಕುಂದಾಪ್ರ ಕನ್ನಡ ದಿನ ನಿಮಿತ್ತ ನಗರದ ಭಾರ್ಗವ ಬಳಗ ವತಿಯಿಂದ ಆ. 11ರಂದು ಕುಂದಾಪ್ರ ಕನ್ನಡ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಸುರೇಶ ಶೆಟ್ಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಯಿಂದ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದೃಶ್ಯ ರೂಪಕ, ಹಾಸ್ಯ ಹಾಗೂ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು.
ಮಂಗಳೂರಿನ ನಂದ ಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ ದೃಶ್ಯ ರೂಪಕ, ಲಾವಣ್ಯ ಬೈಂದೂರು ಕಲಾವಿದರಿಂದ ನಾಯಿ ಕಳೆದಿದೆ ನಾಟಕ ಪ್ರದರ್ಶನ ಹಾಗೂ ಮನು ಹಂದಾಡಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುಮಾರು 700 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಮ್ಮ ಮಂಗಳೂರು ಜನರು ಎಲ್ಲೆಡೆ ಒಂದೆಡೆ ಸೇರಿ ಸಂಭ್ರಮಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದ ನಿಮಿತ್ತ ಆ. 10ರಂದು ನೌಕರರ ಭವನದಲ್ಲಿ ಬೆಳಗ್ಗೆ 9ಗಂಟೆಯಿಂದ ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. 4 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ವರ್ಷದಲ್ಲಿ 5ನೇ ವರ್ಷಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸಲು ಚಿಂತಿಸಲಾಗಿದೆ ಎಂದರು.
ಉದಯ ಶೆಟ್ಟಿ, ನಾಗರಾಜ ಶೆಟ್ಟಿ, ಅಶೋಕ ಶೆಟ್ಟಿ, ರಘುರಾಮ ಶೆಟ್ಟಿ, ಇತರರು ಇದ್ದರು.