ಕೋಟ: ಕೆಲವರ್ ಮಾತಾಡುವತಿಗೆ ನಮ್ದ್ ಶುದ್ಧ ಕನ್ನಡ ಅಂದ್ಹೇಳಿ ಹೇಳುದಿತ್ತ್. ಆದ್ರೆ ಶುದ್ಧ ಕನ್ನಡ, ಅಶುದ್ಧ ಕನ್ನಡ ಅಂದ್ಹೇಳಿ ಇಲ್ಲ. ಗ್ರಾಮ್ಯ ಕನ್ನಡ, ಗ್ರಾಂಥಿಕ ಕನ್ನಡ ಇಷ್ಟೇ ಇಪ್ಪುದ್ ಅಂದ್ಹೇಳಿ. ಕುಂದಗನ್ನಡಕ್ಕೆ ಹಳೀ ಇತಿಹಾಸ ಇತ್ತ್. ಹಳೆಗನ್ನಡ, ಹಳೆ ಶಾಸನ, ಗ್ರಂಥದಲ್ ಈ ಭಾಷಿಯ ಸಾವಿರಾರು ಪದ ಇತ್ತ್. ಭಾಷಿ ಉಳಿಕಿದ್ರೆ ಎಲ್ಲರೂ ಮಾತಾಡ್ಕ್ ಎಂದು ಕುಂದಗನ್ನಡ ಅಧ್ಯಯನಕಾರ ಮನು ಹಂದಾಡಿ ಹೇಳಿದರು.
ಕೋಟದಲ್ಲಿ ಭಾನುವಾರ ನಡೆದ ಕುಂದಗನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.ಸಮ್ಮೇಳನಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಮಕ್ಕಳಿಗೆ ಹೆಚ್ಚ್-ಹೆಚ್ಚ್ ಕುಂದಗನ್ನಡ ಹೇಳಿಕೊಡಿ, ಅಧ್ಯಯನ ಪೀಠ, ಅಕಾಡೆಮಿ ಮೂಲಕ ಒಂದಷ್ಟ್ ಭಾಷಿ ಉಳ್ಸು ಕೆಲಸ ಆಯ್ಲಿ ಎಂದರು.
ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ.ಕುಂದರ್ ಶುಭ ಹಾರೈಸಿದರು. ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ, ಕುಂದಾಪ್ರ ಕನ್ನಡ ಹರಟೆ, ಗೋಷ್ಠಿ ನಡೆಯಿತು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮುಖ್ಯಸ್ಥ ಡಾ.ಅಣ್ಣಯ್ಯ ಕುಲಾಲ್, ಚಿತ್ರ ನಿರ್ದೇಶಕ ಯಾಕುಬ್ ಖಾದರ್ ಗುಲ್ವಾಡಿ, ಕಾರಂತ ಟ್ರಸ್ಟ್‌ನ ಟ್ರಸ್ಟಿ ಸುಶೀಲಾ ಸೋಮಶೇಖರ್, ಕಾರ್ಯಕ್ರಮ ಸಂಘಟಕ ನರೇಂದ್ರ ಕುಮಾರ್ ಕೋಟ ಇದ್ದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ, ಕುಂದಗನ್ನಡ ಮಾತನಾಡಿದರೆ ಕ್ರಮಕೈಗೊಳ್ಳುವ, ನಿರ್ಬಂಧ ಹೇರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇಕು. ಕುಂದಗನ್ನಡ ಅಧ್ಯಯನ ಪೀಠಕ್ಕೆ 1.50 ಕೋಟಿ ರೂ. ಸರ್ಕಾರದಿಂದ ಮಂಜೂರಾಗಿದೆ. ಅದನ್ನು ಸರಿಯಾದ ರೀತಿ ವಿನಿಯೋಗಿಸಿ, ಅಧ್ಯಯನ ಪೀಠ ರಚನೆಯಾಗಬೇಕು. ಕುಂದಗನ್ನಡದ ಭಾಷೆ ಬೆಳೆಸುವ, ಉಳಿಸುವ ಕಾರ್ಯಕ್ರಮ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರತಿ ಊರಿನಲ್ಲೂ ನಡೆಯಬೇಕು.