ಹುಬ್ಬಳ್ಳಿ: ಕುಂದಗೋಳದ ಅಟಲ್ ಸಾಹಿತ್ಯ ವೇದಿಕೆ ಹಾಗೂ ಗುರುಕಾರುಣ್ಯ ಪ್ರತಿಷ್ಠಾನದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನದ ನಿಮಿತ್ತ ಕುಂದಗೋಳದ ಶ್ರೀಮಂತ ನಾಡಗೀರ ವಾಡೆಯಲ್ಲಿ ಡಿ. 25ರಂದು ಬೆಳಗ್ಗೆ 10ಕ್ಕೆ ಜೀವನ ದರ್ಶನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಟಕ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ಅರ್ಥದಲ್ಲಿ ಅಜಾತಶತ್ರುವಾಗಿದ್ದ ಅಟಲ್ ಜಿ ಅವರ ಜನ್ಮದಿನವನ್ನು ಪ್ರತಿವರ್ಷ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಿಂದ ನೂರಾರು ಜನರು ಪ್ರಯೋಜನ ಪಡೆದುಕೊಂಡರು ಎಂದರು.
ಕವಿಗಳೂ ಆಗಿದ್ದ ಅಟಲ್ ಜಿ ಅವರ ಜಯಂತಿ ನಿಮಿತ್ತ ಈ ವರ್ಷ ತತ್ವಪದ, ಕಗ್ಗ, ವಚನ ವ್ಯಾಖ್ಯಾನಗಳ ರಸಗವಳ ಒಳಗೊಂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ. ಎ.ಸಿ. ವಾಲಿ ಗುರೂಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ವೈ.ಎಸ್.ವಿ. ದತ್ತಾ ವಿವಿಧ ವಿಷಯಗಳ ಬಗ್ಗೆ ಮಾತನಾಡುವರು ಎಂದರು.
ತತ್ವದರ್ಶನದಲ್ಲಿ ಕೋಮಲ ನಾಡಗೀರ ಗಾಯನ ಪ್ರಸ್ತುತಪಡಿಸುವರು. ಡಾ. ಸಂಗಮನಾಥ ಲೋಕಾಪುರ ವಿಶ್ಲೇಷಣೆ ಮಾಡುವರು. ಕುಗ್ಗಿದ ಜೀವಕೆ ಕಗ್ಗದ ಉತ್ಸಾಹ ಕುರಿತು ಶಿವಮೊಗ್ಗದ ಕಗ್ಗ ನಟೇಶ ಪ್ರಸ್ತುತಪಡಿಸುವರು. ಸುಶೀಲೇಂದ್ರ ಕುಂದರಗಿ ಅವರ 'ಇದ್ದಟ ಬೆಳಕಿನ್ಯಾಗ' ಕೃತಿ ಲೋಕಾರ್ಪಣೆಯಾಗಲಿದೆ. ಇಂತಹ ವಿವಿಧ ಕಾರ್ಯಕ್ರಮಗಳು ಸಂಜೆಯವರೆಗೂ ನಡೆಯಲಿವೆ.
ಬಸವರಾಜ ಬೆಂಗೇರಿ, ಪರಮೇಶ್ವರ ಯಲವಿಗಿ, ಸಂಭಾಜಿ ತಡಸದ ಅವರನ್ನು ಸನ್ಮಾನಿಸಲಾಗುವುದು. ಶ್ರೀಮಂತ ಅರ್ಜುನ ನಾಡಗೀರ ಗೋಷ್ಠಿಯಲ್ಲಿದ್ದರು.