ಜಿಲ್ಲೆ

ಕುಂದಗೋಳ ಪಟ್ಟಣ ಪಂಚಾಯಿತಿ 25.25 ಲಕ್ಷ ರೂ. ಉಳಿತಾಯ ಬಜೆಟ್

ಕುಂದಗೋಳ: ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಒಟ್ಟು 9 ಕೋಟಿ 34 ಲಕ್ಷ 35 ಸಾವಿರ ರೂ.ಗಳಲ್ಲಿ 25 ಲಕ್ಷ 25 ಸಾವಿರ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಅನೇಕ ಮೂಲಗಳ ಅನುಗುಣವಾಗಿ ಬಜೆಟ್ ಮಂಡಿಸಿದ್ದು, ಸರ್ಕಾರದ ವಿವಿಧ ಯೋಜನೆಗಳಿಂದ ಒಟ್ಟು 735 ಲಕ್ಷ, ಮುನಿಸಿಫಲ್ ನಿಧಿಯಿಂದ ಒಟ್ಟು 199.35 ಲಕ್ಷ ರೂ. ನಿರೀಕ್ಷೆ ಇದೆ. ಅದರಲ್ಲಿ ಆಡಳಿತಕ್ಕಾಗಿ 82.05 ಲಕ್ಷ ರೂ., ಆಡಳಿತ ಮಂಡಳಿಯ ಗೌರವಧನಕ್ಕಾಗಿ 4 ಲಕ್ಷ ರೂ., ವಾಣಿಜ್ಯ ಮಳಿಗೆ ನಿರ್ವಹಣೆಗಾಗಿ 1 ಲಕ್ಷ ರೂ., ಜನಗಣತಿಗಾಗಿ 20 ಸಾವಿರ ರೂ., ರಸ್ತೆ ಚರಂಡಿಗಳ ದುರಸ್ತಿಗಾಗಿ 18 ಲಕ್ಷ ರೂ., ಬೀದಿ ದೀಪ ನಿರ್ವಹಣೆಗೆ 56 ಲಕ್ಷ ರೂ., ಸ್ಮಶಾನ ನಿರ್ವಹಣೆಗೆ 1 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆಗೆ 142.10 ಲಕ್ಷ ರೂ., ನೀರು ನಿರ್ವಹಣೆಗೆ 1.83 ಲಕ್ಷ ರೂ.,ಉದ್ಯಾನ ನಿರ್ವಹಣೆ 1.25 ಲಕ್ಷ ರೂ., ಸೇರಿ ಒಟ್ಟು 5,49.35 ಲಕ್ಷ ರೂ. ಪಾವತಿಗಾಗಿ ಮೀಸಲಿಡಲಾಗಿದೆ. ಪಟ್ಟಣದ ರಸ್ತೆ ನಿರ್ವಹಣೆಗೆ 2.33 ಲಕ್ಷ ಸೇರಿ ಅನೇಕ ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ ಎಂದು ವಿವರಿಸಿದರು. ಉಪಾಧ್ಯಕ್ಷ ಮಂಜುನಾಥ ಹಿರೇಮಠ ಇದ್ದರು.