ಕುಂದಗೋಳ: ಮೂರು ವರ್ಷದ ಅವಳಿಜವಳಿ ಗಂಡುಮಕ್ಕಳಿಬ್ಬರು ಮನೆ ಹಿಂಭಾಗದಲ್ಲಿರುವ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ಮುದಸ್ಸೀರ್ ಶರೀಫಸಾಬ್ ಚಂದುಖಾನವರ (3), ಮುಜಮ್ಮೀಲ್ ಶರೀಫಸಾಬ್ ಚಂದುಖಾನವರ (3) ಮೃತಪಟ್ಟ ಮಕ್ಕಳು. ಇವರು ಮನೆ ಹಿಂಭಾಗದಲ್ಲಿರುವ ಕುಡಿಯುವ ನೀರಿನ ಕೆರೆ ಬಳಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿವೆ. ತಂದೆ ಶರೀಫಸಾಬ್ ಅನಾರೋಗ್ಯದಿಂದ ಮನೆಯಲ್ಲಿದ್ದಾರೆ. ತಾಯಿ ನಿತ್ಯ ಹುಬ್ಬಳ್ಳಿಯಲ್ಲಿ ಕೂಲಿ ಮಾಡಿ ಜೀಈವನ ಸಾಗಿಸುತ್ತಾರೆ. ಮನೆಯಲ್ಲಿ ಅಜ್ಜಿ ಮಕ್ಕಳನ್ನು ನೊಡಿಕೊಳ್ಳುತ್ತಿದ್ದರು. ಗುರುವಾರ ಅಜ್ಜಿ ಮನೆಯಲ್ಲಿ ಕೆಲಸ ಮಾಡುವಾಗ ಹಿಂಭಾಗದಲ್ಲಿರುವ ಕೆರೆ ಬಳಿ ಆಟಕ್ಕೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಮಕ್ಕಳನ್ನು ರಕ್ಷಿಸಿ ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಬದುಕುಳಿಯಲಿಲ್ಲ. ಮಕ್ಕಳ ಸಾವಿಗೆ ಗ್ರಾಮಸ್ಥರು ಮಮ್ಮಲ ಮರುಗಿದರು. ಸ್ಥಳಕ್ಕೆ ತಹಸೀಲ್ದಾರ್ ರಾಜು ಮಾವರಕರ, ತಾಪಂ ಇಒ ಜಗದೀಶ ಕಮ್ಮಾರ, ಕುಂದಗೋಳ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.