ಚಿತ್ರದುರ್ಗ: ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿಗೆ ಮೀಸಲು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಅ.13ರಂದು ಚಿತ್ರದುರ್ಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ‌್ಯದರ್ಶಿ ಜಗನ್ನಾಥ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮುಖಂಡರಾದ ಕಸವನಹಳ್ಳಿ ರಮೇಶ್, ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಹಿರಿಯೂರಿನಿಂದ ಚಿತ್ರದುರ್ಗದವರೆಗೆ ಪಾದಯಾತ್ರೆ ಬುಧವಾರ ಆರಂಭವಾಗಿದೆ ಎಂದರು.
ಬುರುಜಿನೊಪ್ಪದ ರಕ್ಷಾಗಣಪತಿ ದೇವಾಲಯದಲ್ಲಿ ಯಾತ್ರೆ ತಂಗಲಿದೆ. 12ರ ಬೆಳಗ್ಗೆ 6ಕ್ಕೆ ಅಲ್ಲಿಂದ ಹೊರಟು, ರಾತ್ರಿ ಚಿತ್ರದುರ್ಗ ತಲುಪಲಿದೆ. 13ರಂದು ಡಿಸಿ ಕಚೇರಿ ಬಳಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದ 18 ಜಿಲ್ಲೆಗಳ 46 ತಾಲೂಕುಗಳಲ್ಲಿ 26 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗರನ್ನು ಕೇಂದ್ರದ ಸರ್ಕಾರ ಒಬಿಸಿ ಮೀಸಲುಪಟ್ಟಿಗೆ ಸೇರಿಸುವಂತೆ 26 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಅನುಮೋದಿಸಿದೆ ಎಂದು ಹೇಳಿದರು.
2024 ಲೋಕಸಭಾ ಚುನಾವಣೆಗೂ ಮೊದಲು ಬೇಡಿಕೆ ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಪಿ.ಚೇತನ್, ಮುಖಂಡರಾದ ಎಚ್.ಆರ್.ತಿಮ್ಮಯ್ಯ, ಜಿ.ಹನುಮಂತಪ್ಪ, ಒ.ಎಲ್.ಜ್ಞಾನೇಶ್ವಕುಮಾರ್, ಎಂ.ಡಿ.ಕುಮಾರ್, ಪರಮೇಶ್ವರ, ರಂಗಧಾಮಯ್ಯ, ನರೇಂದ್ರಬಾಬು ಇತರರು ಇದ್ದರು.