ಕುಮಟಾ: ಪಟ್ಟಣದ ಮಣಕಿ ಮೈದಾನದ ಅಂಚಿನ ಹಿಂದು ರುದ್ರಭೂಮಿಗೆ ಸರಿಯಾದ ಕಾಯಕಲ್ಪ ಹಾಗೂ ನಿರ್ವಹಣೆ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಶವ ದಹನದ ಶೆಡ್ನ ದಿಕ್ಕು ಸರಿಯಾಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ.
ಮಣಕಿ ಮೈದಾನದ ಅಂಚಿಗೆ ಕರಾವಳಿ ಕಾವಲು ಪಡೆಯ ಕಚೇರಿಯ ಪಕ್ಕದಲ್ಲಿ ಇರುವ ಹಿಂದು ರುದ್ರಭೂಮಿ ಅಭಿವೃದ್ಧಿ ಕಂಡಿದ್ದು ಅಷ್ಟಕ್ಕಷ್ಟೆ. ರುದ್ರಭೂಮಿಯ ಆವಾರದಲ್ಲಿ ಒಂದು ಪಾಳುಬಿದ್ದ ಬಾವಿ ಮತ್ತು ಚಿಕ್ಕ ಕೋಣೆ ಬಿಟ್ಟರೆ ಬೇರೇನಿಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಈ ರುದ್ರಭೂಮಿಯ ಆವಾರ ಗೋಡೆಗೆ ತಾಗಿ ಇರುವ ಪುರಸಭೆಯ ಶೌಚಗೃಹವೊಂದು ಜನರ ದುರ್ಬಳಕೆಯ ಪ್ರತೀಕವಾಗಿ ನಿಂತಿದೆ.
ಬಹಳ ಕಾಲದಿಂದ ಇಲ್ಲಿನ ರುದ್ರಭೂಮಿಯನ್ನು ಸುವ್ಯವಸ್ಥಿತಗೊಳಿಸುವ ಬೇಡಿಕೆ ಇದ್ದೇ ಇದೆ. ಇಲ್ಲಿನ ಯುಗಾದಿ ಉತ್ಸವ ಸಮಿತಿ ಕೂಡ ರುದ್ರಭೂಮಿಯ ಸಂಪೂರ್ಣ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಯ ಸಹಕಾರ ಮತ್ತು ಅವಕಾಶಕ್ಕಾಗಿ ಕಾಯುತ್ತಿದೆ. ಇಂದು-ನಾಳೆ ಎನ್ನುತ್ತಲೇ ವರ್ಷಗಳೇ ಕಳೆದರೂ ರುದ್ರಭೂಮಿಯ ಯಾವ ಕೆಲಸವೂ ಆಗಿಲ್ಲ. ಪಟ್ಟಣದ ಮುಖ್ಯ ರುದ್ರಭೂಮಿಯಾಗಿದ್ದರೂ ಇಲ್ಲಿನ ವ್ಯವಸ್ಥೆ ಹಾಗೂ ವಾತಾವರಣವನ್ನು ಕನಿಷ್ಠ ಮಟ್ಟಕ್ಕೆ ಇಟ್ಟಿರುವುದು ಸಾಮಾಜಿಕ ಹಾಗೂ ಜನರ ಧಾರ್ವಿುಕ ನಂಬಿಕೆ, ನಡವಳಿಕೆಯ ವಿಡಂಬನೆ ಎನ್ನಬಹುದು. ಹೀಗಾಗಿ, ರುದ್ರಭೂಮಿಯಲ್ಲಿ ಮೃತರ ಗೌರವಯುತ ಹಾಗೂ ಧಾರ್ವಿುಕ ನಂಬಿಕೆಗಳಿಗೆ ತಕ್ಕಂತೆ ಅಂತ್ಯ ಸಂಸ್ಕಾರ ನಡೆಸಲು ಬೇಕಾದ ಸಮರ್ಪಕ ಕಾಯಕಲ್ಪ ಆಗಬೇಕಿದೆ.
ಮಣಕಿ ಮೈದಾನದ ಪಕ್ಕದ ರುದ್ರಭೂಮಿಯ ಸ್ಥಿತಿ ಶೋಚನೀಯವಾಗಿದೆ. ಬೇರೆ ತಾಲೂಕುಗಳಲ್ಲಿ ರುದ್ರಭೂಮಿಗಳ ಅಭಿವೃದ್ಧಿ ಗಮನಿಸುವಾಗ ಇಲ್ಲಿನ ದುಸ್ಥಿತಿ ಬೇಸರ ತರಿಸುತ್ತದೆ. ರುದ್ರಭೂಮಿಯೊಳಗೆ ಸುಟ್ಟ ಮೂಳೆ ತುಂಡುಗಳ ಗುಪ್ಪೆ ನೋಡಿದರೆ ಅಚ್ಚರಿಯಾಗುತ್ತದೆ. ಮುಖ್ಯವಾಗಿ ಅಂತ್ರಕ್ರಿಯೆಯ ಶೆಡ್ನ ದಿಕ್ಕು ಸರಿ ಇಲ್ಲದ್ದರಿಂದ ಶೆಡ್ನ ಹೊರಗೆ ಬಹಳಷ್ಟು ಶವದಹನ ನಡೆಯುತ್ತಿವೆ. ಇದನೆಲ್ಲ ಸರಿಪಡಿಸುವವರು ಯಾರು ಮತ್ತು ಯಾವಾಗ ಎಂಬುದು ಪ್ರಶ್ನೆಯಾಗಿದೆ. ಅವಕಾಶ ಕೊಟ್ಟರೆ ನಾವು ರುದ್ರಭೂಮಿಯನ್ನು ತುರ್ತಾಗಿ ಅಭಿವೃದ್ಧಿ ಪಡಿಸಲು ಹಾಗೂ ಜನರಿಗೆ ಬೇಕಾದಂತೆ ಶೆಡ್ ನಿರ್ವಿುಸಿಕೊಡಲು ಸಿದ್ಧರಿದ್ದೇವೆ. | ಅತುಲ ಕಾಮತ, ಕುಮಟಾ ರೋಟರಿ ಕ್ಲಬ್