ಕಾಸರಗೋಡು: ಕುಂಬಳೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಮರ್ಚಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಸಮಿತಿಯನ್ನು ಸಹಕಾರಿ ಇಲಾಖೆ ಅಮಾನತುಗೊಳಿಸಿದೆ.
ಸೊಸೈಟಿಯ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಸಹಕಾರಿ ಇಲಾಖೆ ಇನ್‌ಸ್ಪೆಕ್ಟರ್ ಬೈಜುರಾಜ್ ಅವರನ್ನು ನಿಯೋಜಿಸಲಾಗಿದೆ. ಹಲವು ವರ್ಷಗಳಿಂದ ಸೊಸೈಟಿಯಲ್ಲಿ ನಡೆಯುತ್ತಿದೆ ಎನ್ನಲಾದ ಆರ್ಥಿಕ ಅವ್ಯವಹಾರ ಹಾಗೂ ಲೆಕ್ಕಪತ್ರಗಳ ಲೋಪದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೊಸೈಟಿಯಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಸೊಸೈಟಿ ಸದಸ್ಯ ವಿಕ್ರಂ ಪೈ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು. ಒಂಬತ್ತು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯಿಂದ ವಿಕ್ರಂ ಪೈ ಕಳೆದ ವರ್ಷ ಜೂನ್‌ನಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು.
ದೂರು ಪರಿಗಣಿಸಿ ಹೈಕೋರ್ಟ್ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಒಬ್ಬೊಬ್ಬ ಸದಸ್ಯ ರಾಜೀನಾಮೆ ಸಲ್ಲಿಸುತ್ತಾ ಬಂದಿದ್ದು, ಪ್ರಸಕ್ತ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಆಡಳಿತ ಸಮಿತಿಯನ್ನು ಅಮಾನತುಗೊಳಿಸಲಾಗಿದೆ.