ಪಿ. ವಿ.ಅಂತೋಣಿ ಸಿದ್ದಾಪುರ
ಕೊಡಗು ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದೆ. ಕೆಲವು ಗ್ರಾಮಗಳ ಹೆಸರೇ ಅದರ ಇತಿಹಾಸವನ್ನು ಸೂಚಿಸುತ್ತದೆ. ಅದೇ ರೀತಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗುಂಡಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ.
ಹಿಂದಿನ ಕಾಲದಲ್ಲಿ ಗ್ರಾಮದ ಜನರ ನಿತ್ಯ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಮಣ್ಣಿನಿಂದ ಮಾಡಿಕೊಡುವ ಕುಂಬಾರರು ವಾಸವಾಗಿದ್ದ ಸ್ಥಳವೇ ಕುಂಬಾರಗುಂಡಿ. ಇಂದಿಗೂ ಈ ಗ್ರಾಮವನ್ನು ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ.
ಕೇರಳದ ಮಲಪುರಂ ಜಿಲ್ಲೆಯ ಪೆರುಂದ ಮಣ್ಣ ಎಂಬ ಗ್ರಾಮದಿಂದ ಸುಮಾರು 75 ವರ್ಷಗಳ ಹಿಂದೆ ಕುಂಬಾರ ಸಮುದಾಯಕ್ಕೆ ಸೇರಿದ ಹತ್ತಕ್ಕೂ ಹೆಚ್ಚು ಕುಟುಂಬಗಳು ಕೊಡಗಿನ ನೆಲ್ಯಹುದಿಕೇರಿ ಗ್ರಾಮಕ್ಕೆ ವಲಸೆ ಬಂದಿದ್ದರು. ಇವರು ವೃತ್ತಿಯಲ್ಲಿ ಕುಂಬಾರರಾಗಿದ್ದರೂ ಇವರ ಸುತ್ತಮುತ್ತಲಿನಲ್ಲಿ ಇರುವ ಕಾಫಿ ತೋಟಗಳಲ್ಲಿ ಅಂದು ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲವು ವರ್ಷ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇವರು ಕಾಲಕ್ರಮೇಣ ತಮ್ಮ ಕುಲಕಸುಬು ಕುಂಬಾರ ವೃತ್ತಿಯನ್ನು ಕಾವೇರಿ ನದಿ ದಡದಲ್ಲಿ ಪ್ರಾರಂಭಿಸಿದರು.
ನೆಲ್ಯಹುದಿಕೇರಿ ಎರಡನೇ ವಿಭಾಗದಲ್ಲಿ ಎಲ್ಲೆಲ್ಲೂ ಹೊಲಗದ್ದೆಗಳಿಂದ ಕೂಡಿದೆ. ಆದರೆ, ಇವರಿಗೆ ಮಡಕೆ, ಕುಡಿಕೆ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳನ್ನು ತಯಾರಿಸಲು ಯೋಗ್ಯವಾದ ಮಣ್ಣು ಈ ಭಾಗದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಲಭ್ಯವಾಗುತ್ತಿತ್ತು.
ಕುಟುಂಬದ ಹಿರಿಯರು ಪ್ರಾರಂಭದಲ್ಲಿ ಆ ಭಾಗದಿಂದ ಮಣ್ಣನ್ನು ಶೇಖರಿಸಿ ಸಣ್ಣ ಪ್ರಮಾಣದಲ್ಲಿ ಮಡಕೆ ತಯಾರಿಸುವುದನ್ನು ಪ್ರಾರಂಭಿಸಿದರು. ಇದರಿಂದ ತೋಟ ಕೆಲಸವನ್ನು ಮಾತ್ರ ಆಶ್ರಯಿಸಿ ಜೀವನ ಸಾಗಿಸುತ್ತಿದ್ದ ಇವರಿಗೆ ಕುಂಬಾರ ವೃತ್ತಿ ಮತ್ತಷ್ಟು ಲಾಭ ತಂದು ಕೊಟ್ಟಿತು. ಕಾಲಕ್ರಮೇಣ ಕುಟುಂಬ ಸದಸ್ಯರೆಲ್ಲರೂ ಕುಲಕಸುಬನ್ನು ಆಶ್ರಯಿಸಿ ಒಂದೇ ಪ್ರದೇಶದಿಂದ ಮಣ್ಣನ್ನು ಶೇಖರಿಸಿ ದಿನ ನಿತ್ಯ ಬಳಸುವ ಪಾತ್ರೆ ಮತ್ತಿತರ ವಸ್ತುಗಳನ್ನು ತಯಾರಿಸಲಾರಂಭಿಸಿದರು. ಹೀಗೆ ಮಣ್ಣು ತೆಗೆದ ಪ್ರದೇಶದಲ್ಲಿ ಅಂದು ದೊಡ್ಡದೊಂದು ಗುಂಡಿಯಾಯಿತು. ಈ ಗುಂಡಿಯಲ್ಲಿ ವಾಸ ಮಾಡಲು ಪ್ರಾರಂಭಿಸಿ ಬಳಿಕ ಇದು ಗ್ರಾಮವಾಗಿ ನಿರ್ಮಾಣವಾಯಿತು. ಅಂದಿನಿಂದ ಇದನ್ನು ‘ಕುಂಬಾರಗುಂಡಿ’ ಎಂದು ಸ್ಥಳೀಯರು ಕರೆಯಲಾರಂಭಿಸಿದರು. ನೆಲ್ಯಹುದಿಕೇರಿಯ 2ನೇ ವಿಭಾಗದಲ್ಲಿರುವ ಈ ಗ್ರಾಮದ ಹೆಸರು ಅಂದಿನಿಂದ ಕುಂಬಾರಗುಂಡಿ ಎಂದೇ ಪ್ರಸಿದ್ಧಿಯಾಗಿದೆ.
ಈ ಭಾಗದಲ್ಲಿ ಕುಂಬಾರರು ಮಾತ್ರ ವಾಸಿಸುತ್ತಿದ್ದರು. ಇದೀಗ ಈ ಪ್ರದೇಶದಲ್ಲಿ 200ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಕುಂಬಾರ ಸಮುದಾಯಕ್ಕೆ ಸೇರಿದ ಎರಡು ಕುಟುಂಬಗಳು ಮಾತ್ರ ಉಳಿದಿದ್ದು, ಅವರು ಕುಂಬಾರ ವೃತ್ತಿಯನ್ನೇ ಆಶ್ರಯಿಸಿ ಜೀವಿಸುತ್ತಿದ್ದಾರೆ. ಇಂದಿಗೂ ಇವರು ಹಲವು ಬಗೆಯ ಮಡಿಕೆಗಳು, ಹೂ ಗಿಡದ ಚಟ್ಟಿಗಳು, ದೀಪಗಳು, ಕುಲ್ಚಿ ಕಪ್‌ಗಳು, ಚಿಕ್ಕ ಪುಟ್ಟ ಮಣ್ಣಿನ ಬಟ್ಟಲುಗಳನ್ನು ತಯಾರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕುಂಬಾರಗುಂಡಿ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿದೆ. ಗ್ರಾಮ ಪಂಚಾಯಿತಿ ಕೇಂದ್ರದಿಂದ 1.58 ದೂರದಲ್ಲಿದೆ. ಈ ಗ್ರಾಮಕ್ಕೆ ಬರುವವರು ಕುಶಾಲನಗರ ಪಟ್ಟಣದಿಂದ 30 ಕಿ.ಮೀ. ಹಾಗೂ ಮಡಿಕೇರಿಯಿಂದ 40 ಕಿ.ಮೀ. ದೂರವಿದ್ದು, ನೆಲ್ಯಹುದಿಕೇರಿ ಗ್ರಾಮ ಕಾವೇರಿ ನದಿ ತೀರದ ದಡದಲ್ಲಿದೆ. ಈ ವ್ಯಾಪ್ತಿಯಲ್ಲಿ ಹೆಚ್ಚು ಮಲೆಯಾಳಿ ಭಾಷೆ ಚಾಲ್ತಿಯಲ್ಲಿದೆ.
ನದಿ ದಡದಲ್ಲಿ ವಾಸ: 2018-2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ನದಿ ತುಂಬಿ ಹರಿಯಿತು. ಇದರ ಪರಿಣಾಮ ಕುಂಬಾರ ಗುಂಡಿ ಗ್ರಾಮದ ನದಿ ದಡದ ಪ್ರದೇಶಗಳಲ್ಲಿ ವಾಸವಿದ್ದ ಹಲವು ಮನೆಗಳು ನೆಲಸಮವಾಗಿದ್ದವು. ಸರ್ಕಾರ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿ ಹಲವು ವರ್ಷಗಳು ಕಳೆದರೂ ಇಂದಿಗೂ ಕುಟುಂಬಗಳಿಗೆ ಶಾಶ್ವತ ಸೂರು ಲಭಿಸಿಲ್ಲ. ಇಂದಿಗೂ ಪ್ಲಾಸ್ಟಿಕ್ ಶೆಡ್‌ಗಳಲ್ಲಿ ಜೀವನ ನಡೆಸುವಂತಾಗಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ನದಿ ದಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳ ಗ್ರಾಮವನ್ನು ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದಲೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ನಿರಂತರ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಅಧಿಕಾರಿಗಳು ಗ್ರಾಮದತ್ತ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.