ಕೆ.ಆರ್.ಪೇಟೆ: ತಾಲೂಕಿನ ಅಂಬಿಗರಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 16ರವರೆಗೆ ಮಹಾಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಗಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಾಲೂಕಿನ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಬಳಿ ಕಾವೇರಿ-ಹೇಮಾವತಿ-ಲಕ್ಷ್ಮಣತೀರ್ಥ ನದಿಗಳು ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಾಮೇಳ ನಡೆಯಲಿದ್ದು, ಪ್ರತಿದಿನವೂ ಗಂಗಾರತಿ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಲೆ ಮಹದೇಶ್ವರ ಬೆಟ್ಟದಿಂದ ತ್ರಿವೇಣಿ ಸಂಗಮದವರೆಗೂ ಜ್ಯೋತಿಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 9 ವಷರ್ಗಳ ಹಿಂದೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೆಯೂ ಯಶಸ್ವಿಯಾಗಿ ಕುಂಭಮೇಳ ನಡೆದಿತ್ತು. ಆಗ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದ ಕೆ.ಸಿ.ನಾರಾಯಣಗೌಡ ಮೇಳವನ್ನು ಯಶಸ್ವಿಗೊಳಿಸಿದ್ದರು. ಈಗ ಸಚಿವರಾಗಿ ಮತ್ತೊಮ್ಮೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು, ಉತ್ತಮವಾಗಿ ರೂಪಿಸುತ್ತಿದ್ದಾರೆ. ಮಹಾಕುಂಭಮೇಳದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಎಲ್ಲರ ಸುಯೋಗ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಂಗಾರತಿ, ಸ್ನಾನಘಟ್ಟಗಳನ್ನು ನಿರ್ಮಿಸಲಾಗುತ್ತಿದೆ. ಮೇಳದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕುಂಭಮೇಳ ಆಯೋಜನೆ ಕುರಿತು ಈ ಹಿಂದೆ ವಿಜಯನಗರದ ಮಠದಲ್ಲಿ ಪೂರ್ವಭಾವಿ ಸಭೆ ನಡೆದಿತ್ತು. ಇಂದು ಅದಕ್ಕೆ ಪೂರಕವಾಗಿ ಮತ್ತೊಂದು ಸಭೆ ನಡೆದಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಜನಮಾನಸಕ್ಕೆ ಮುಟ್ಟುವ ಕಾರ್ಯಕ್ರಮವಾಗಲಿ ಎಂದು ಆಶಿಸಿದರು.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿ, ಮಹಾಕುಂಭಮೇಳ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ. 9 ವರ್ಷಗಳ ಹಿಂದೆ ಅದ್ಭುತವಾಗಿ ನಡೆದಿತ್ತು. ಇದೀಗ ಮತ್ತೆ ನಡೆಯುತ್ತಿದೆ. ಇದು ಕೆಆರ್ ಪೇಟೆಗೆ ಮಾತ್ರವಲ್ಲ, ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಹೆಮ್ಮೆಯ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಗಣ್ಯರು ಬರಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, 2013ರ ಬಳಿಕ ಈಗ ಕುಂಭಮೇಳ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಸಭೆಗೂ ಮುನ್ನ ತ್ರಿವೇಣಿ ಸಂಗಮದ ಸ್ಥಳಗಳನ್ನು ಎಲ್ಲ ಮಠಗಳ ಶ್ರೀಗಳು ಹಾಗೂ ಅಧಿಕಾರಿಗಳು ಪರಿಶೀಲಿಸಿದರು. ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಎಂಎಲ್‌ಸಿ ಕೇಶವ ಪ್ರಸಾದ್, ಮಾಜಿ ಎಂಎಲ್‌ಸಿ ಮಾದೇಗೌಡ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಎಸ್‌ಪಿ ಯತೀಶ್ ಉಪಸ್ಥಿತರಿದ್ದರು.