ಕುಮಟಾ: ತಾಲೂಕಿನಲ್ಲಿ ಗಾಳಿಮಳೆ, ಅಪಘಾತ ಇನ್ನಿತರ ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಪದೇಪದೆ ಹಾನಿಯಾಗುವುದರಿಂದ ಜನರಿಗೆ ವಿದ್ಯುತ್ ಸಂಪರ್ಕಕ್ಕೆ ಅಡ್ಡಿ ಆಗದಿರಲಿ ಎಂಬ ಉದ್ದೇಶದಿಂದ 13 ಲಿಂಕ್‌ಲೈನ್ ವ್ಯವಸ್ಥೆ ಜಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಹೆಸ್ಕಾಂ ಎಇಇ ರಾಜೇಶ ಮಡಿವಾಳ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಪ್ರಗತಿ ವಿವರಿಸಿದರು.
ಲಿಂಕ್ ಲೈನ್ ವ್ಯವಸ್ಥೆಯಿಂದಾಗಿ ಒಂದು ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಇದ್ದರೂ ಪರ್ಯಾಯ ಮಾರ್ಗದ ಮೂಲಕ ತುರ್ತಾಗಿ ವಿದ್ಯುತ್ ಪೂರೈಕೆ ಆಗಲಿದೆ. ಮಿರ್ಜಾನದ ಎತ್ತಿನಬೈಲದಲ್ಲಿ ಗ್ರಿಡ್ ಸ್ಥಾಪನೆಗೊಳ್ಳಲಿದೆ. ಇದಕ್ಕಾಗಿ ಜಾಗ ಖರೀದಿಗೆ 78 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಿಡ್‌ನಿಂದ ಮಿರ್ಜಾನ, ಕೋಡ್ಕಣಿ, ದೀವಗಿ ಇನ್ನಿತರ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪಟ್ಟಣ ಪ್ರದೇಶದ ಮಾದರಿಯಲ್ಲೇ ನಿರಂತರ ವಿದ್ಯುತ್ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.
ಇಲಾಖೆಯಿಂದ 35 ಮಂದಿ ಹೊರಗುತ್ತಿಗೆ ನೌಕಕರನ್ನು ನಿಯೋಜಿಸಲಾಗಿದೆ. ಈಗಾಗಲೇ ಮಳೆ-ಗಾಳಿಗೆ 350 ಕಂಬಗಳು, 18 ಪರಿವರ್ತಕಗಳು, 3.88 ಕಿ.ಮೀ. ಕಂಡಕ್ಟರ್‌ಗಳು ಹಾನಿಯಾಗಿದ್ದು, ಎಲ್ಲೆಡೆ ದುರಸ್ತಿ ಮಾಡಲಾಗಿದೆ. ಶೇ. 99ರಷ್ಟು ಗೃಹಜ್ಯೋತಿ ನೋಂದಣಿಯಾಗಿದೆ ಎಂದರು.
ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ನಿರ್ವಹಣೆ ಕಷ್ಟವಾಗಿದೆ. ಇಲಾಖೆಯ ಮುಖ್ಯ ಕಚೇರಿ ಕಟ್ಟಡ ಶಿಥಿಲವಾಗಿದ್ದು, ಎರಡು ವರ್ಷದ ಹಿಂದೆಯೇ ವರದಿ ಸಲ್ಲಿಸಿದ್ದರೂ ಈವರೆಗೆ ಅನುದಾನ ಸಿಕ್ಕಿಲ್ಲ ಎಂದು ಎಡಿ ಚೇತನ ನಾಯ್ಕ ತಿಳಿಸಿದರು.
ಸಿಡಿಪಿಒ ಶೀಲಾ ಮಾತನಾಡಿ, ಒಟ್ಟು 32 ಕಡೆಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಬೇಕಿದೆ. 38 ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿಗಳು ನಡೆಯುತ್ತಿವೆ ಎಂದರು.
ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ವಿವರಿಸಿದ ಬಿಇಒ ರಾಜೇಂದ್ರ ಭಟ್, ಮೇದಿನಿ ಹಾಗೂ ಗಂಗಾವಳಿಯಲ್ಲಿ ಶಾಲೆಗೆ ಹೊಸ ಕೊಠಡಿ ನಿರ್ಮಿಸುವ ಅಗತ್ಯವಿದೆ. ಅತಿಥಿ ಶಿಕ್ಷಕರ ನೇಮಕದಿಂದ ಶಿಕ್ಷಕರ ಕೊರತೆ ಅಷ್ಟಾಗಿಲ್ಲ. ಶಾಲಾ ಕಟ್ಟಡಗಳ ತುರ್ತು ರಿಪೇರಿಗಾಗಿ 36.16 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರ ಹೊರತಾಗಿ 64 ಲಕ್ಷ ರೂ. ಗಳ ಅನುದಾನಕ್ಕಾಗಿ ವಿಸ್ತ್ರತ ವರದಿಯೂ ಸಲ್ಲಿಕೆಯಾಗಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯುತ್ತಮವಾಗಿದೆ. ಒಟ್ಟಾರೆ, ಶಾಲೆಗಳ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಫಲಿತಾಂಶ ಉತ್ತಮವಾಗಿದೆ ಎಂದರು.
ಸಮನ್ವಯಾಧಿಕಾರಿ ರೇಖಾ ನಾಯ್ಕ, ಶಿಕ್ಷಣ ಇಲಾಖೆಯ ಪೂರಕ ಮಾಹಿತಿ ನೀಡಿ ಶೇ. 92.6ರಷ್ಟು ಸಮವಸ್ತ್ರ ಪೂರೈಕೆಯಾಗಿದೆ. ಪಠ್ಯಪುಸ್ತಕಗಳು ಶೇ. 58.22ರಷ್ಟು ವಿತರಣೆಯಾಗಿದ್ದು, ಶೂ ಸಾಕ್ಸ್ ಅನುದಾನ ಬಂದಿಲ್ಲ ಎಂದರು.
2024-25ರ ತಾಪಂ ಬಜೆಟ್ ಮಂಡನೆ
ತಾಪಂನಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಎನ್.ಜಿ. ನಾಯಕ 2024-25ನೇ ಸಾಲಿಗಾಗಿ ಬಜೆಟ್ ಮಂಡಿಸಿದರು. 2024-25ನೇ ಸಾಲಿಗಾಗಿ 96.31 ಕೋಟಿ ರೂ. ಅನುದಾನ ನಿಗದಿಯಾಗಿದೆ. 2023-24ನೇ ಸಾಲಿಗಿಂತ 9.61 ಕೋಟಿ ರೂ. ಹೆಚ್ಚುವರಿ ಅನುದಾನ ಕಲ್ಪಿಸಲಾಗಿದೆ. ತಾಪಂ ಅಧೀನ ಇಲಾಖೆಗಳ ಸಿಬ್ಬಂದಿ, ಅಧಿಕಾರಿ ವೇತನ, ವಿವಿಧ ಲೆಕ್ಕಶೀರ್ಷಿಕೆಗಳಡಿ 87.92 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ವೇತನೇತರ ವೆಚ್ಚಕ್ಕಾಗಿ 8.39 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಕ್ಷಮೆ ಕೇಳಿದ ಹೆಸ್ಕಾಂ ಎಇಇ
ಸಭೆಗೆ ವಿಳಂಬವಾಗಿ ಬಂದ ಹೆಸ್ಕಾಂ ಎಇಇ ರಾಜೇಶ ಮಡಿವಾಳ, ಸಭೆಯಲ್ಲಿ ಮೊಬೈಲ್‌ನಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಆಗ ಆಡಳಿತಾಧಿಕಾರಿ ಎನ್.ಜಿ. ನಾಯಕ ಪ್ರಗತಿ ವರದಿ ಮಂಡನೆ ನಿಲ್ಲಿಸಿದರು. ರಾಜೇಶ ಮಾತನಾಡುವುದು ಮುಗಿದ ಬಳಿಕ ವರದಿ ಮಂಡಿಸಿದರು. ಬಳಿಕ ಹೆಸ್ಕಾಂ ವರದಿ ಮಂಡಿಸುವಾಗ ಎಇಇ ರಾಜೇಶ ಮಡಿವಾಳ ಕ್ಷಮೆ ಕೋರಿದರು. ಜತೆಗೆ ಮೊಬೈಲ್ ಬಳಕೆಯ ಅನಿವಾರ್ಯತೆಯನ್ನೂ ತಿಳಿಸಿದರು.